ರಾಜ್ಯಕ್ಕೆ ಅಕ್ಕಿ ನೀಡದೇ ಇರುವುದರ ಹಿಂದೆ ಷಡ್ಯಂತ್ರವಿದೆ -ಡಿಸಿಎಂ ಡಿ.ಕೆ.ಶಿ

ಬೆಂಗಳೂರು: ರಾಜ್ಯಕ್ಕೆ ಅಕ್ಕಿ ನೀಡದೇ ಇರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪ ಮಾಡಿದರು.

ಡಿಕೆಶಿ ಅವರು ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಇದರ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಎಲ್ಲವನ್ನು ಬಹಿರಂಗಪಡಿಸುತ್ತೇನೆ ಎಂದವರು ತಿಳಿಸಿದರು.

ಕೇಂದ್ರ ಸರ್ಕಾರ ಊಹೆಗೂ ಮೀರಿ ರಾಜ್ಯದ ವಿರುದ್ಧ ಧೋರಣೆ ತಾಳುತ್ತಿದೆ. ಈ ಬಗ್ಗೆ ಕಾನೂನು ತಜ್ಞರ ಜತೆ ಚರ್ಚಿಸಿ ನಿಮ್ಮ ಮುಂದೆ ಬಹಿರಂಗಪಡಿಸುತ್ತೇನೆಂದು ಅವರು ಹೇಳಿದರು.

ರಾಜ್ಯ ಸರ್ಕಾರಕ್ಕೆ ತೊಂದರೆ ಕೊಡಲು, ಬಡವರಿಗೆ ಅಕ್ಕಿ ನೀಡದಿರಲು ಕೇಂದ್ರ ಸರಕಾರವು ತೀರ್ಮಾನಿಸಿದೆ. ಪುಕ್ಕಟೆಯಾಗಿ ಅಕ್ಕಿ ನೀಡಿ ಎಂದು ನಾವು ಅವರಿಗೆ ಕೇಳಿರಲಿಲ್ಲ. ಆರಂಭದಲ್ಲಿ ನೀಡಲು ಒಪ್ಪಿದವರು, ನಂತರ ಅದನ್ನು ನಿರಾಕರಿಸಿದ್ದಾರೆ. ಹೀಗಾಗಿ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದಿಂದ ನಾಳೆ ಪ್ರತಿಭಟನೆ ಮಾಡಲಾಗುತ್ತಿದೆ ಎಂದವರು ತಿಳಿಸಿರು.

ಪಕ್ಷದ ಎಲ್ಲಾ ನಾಯಕರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದು, ನಾನು ಸಹ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದೇನೆಂದರು.

ಅಶೋಕ್ ತಮ್ಮ ತಟ್ಟೆಯಲ್ಲಿರುವ ಹೆಗ್ಗಣ ತೆಗೆಯಲಿ: ಅಶೋಕ್ ಅವರ ಹೇಳಿಕೆ ಕುರಿತು ಮಾಧ್ಯಮದವರು ಕೇಳಿದಾಗ, ಅಶೋಕ್ ಅವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ತೆಗೆದುಹಾಕಲಿ. ಅವರ ಪಕ್ಷದಲ್ಲಿನ ನಾಯಕರ ಹೇಳಿಕೆ ಕುರಿತು ಗೊಂದಲ ಬಗೆಹರಿಸಿಕೊಳ್ಳಲಿ. ಮೊದಲು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ. ನಂತರ ನಮ್ಮ ಪಕ್ಷ, ಮುಖ್ಯಮಂತ್ರಿ ವಿಚಾರದ ಬಗ್ಗೆ ಮಾತನಾಡಲಿ ಎಂದರು.

ಸುರೇಶ್ ಅವರ ಹೇಳಿಕೆ ವೈರಾಗ್ಯದ್ದಲ್ಲ: ಡಿ.ಕೆ. ಸುರೇಶ್ ಅವರು ರಾಜಕೀಯ ವೈರಾಗ್ಯದ ಕುರಿತು ಮಾತನಾಡಿರುವ ಬಗ್ಗೆ ಕೇಳಿದಾಗ, ಡಿ.ಕೆ. ಸುರೇಶ್ ಬಹಳ ಪ್ರಜ್ಞಾವಂತ ಹಾಗೂ ಅನುಭವವಿರುವ ನಾಯಕರು. ಅವರಿಗೆ ಹೊಸ ನಾಯಕತ್ವ ಬೆಳೆಸಬೇಕು ಎಂಬ ಆಲೋಚನೆಗಳಿರುತ್ತವೆ. ಅವರಿಗೆ ಯಾವುದೇ ರೀತಿಯ ವೈರಾಗ್ಯವಿಲ್ಲ. ನಿಮ್ಮಷ್ಟಕ್ಕೆ ನೀವೇ ಕಲ್ಪನೆಗಳನ್ನು ಮಾಡಿಕೊಂಡರೆ ಅದು ನಿಮಗೆ ಬಿಟ್ಟ ವಿಚಾರ ಎಂದು ತಿಳಿಸಿದರು.