ಬೆಂಗಳೂರು: ಮಾದಕ ವಸ್ತುಗಳ ಹಾವಳಿ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ ಆದರೂ ಇದಕ್ಕೆ ಮತ್ತಷ್ಟು ಕಡಿವಾಣ ಹಾಕುವುದು ಖಂಡಿತಾ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಶ್ವ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾದಕ ವಸ್ತುಗಳು ಜೀವನವನ್ನೇ ಹಾಳು ಮಾಡುತ್ತದೆ, ದುಶ್ಚಟಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲು ಮಾಡುತ್ತದೆ ಎಂದು ಎಚ್ಚರಿಸಿದರು.
ಇತ್ತೀಚೆಗೆ ರಾಜ್ಯದಲ್ಲಿ ಹಲವಾರು ಮಂದಿ ಚಲನಚಿತ್ರ ನಟ-ನಟಿಯರು, ಗಣ್ಯರ ಮಕ್ಕಳು ಸಿಕ್ಕಿಬಿದ್ದಿದ್ದನ್ನು ನೋಡಿದ್ದೇವೆ.
ಮುಂದಿನ ದಿನಗಳಲ್ಲಿ ನೀವು ಮಾದಕ ವಸ್ತುಗಳನ್ನು ಬಳಸಬಾರದು, ನಿಮ್ಮ ಸ್ನೇಹಿತರು ಬಳಸಲು ಅವಕಾಶ ನೀಡಬಾರದು ಎಂದು ಡಿಕೆಶಿ ಸಲಹೆ ನೀಡಿದರು.
ಒಂದು ವೇಳೆ ಯಾರಾದರೂ ಮಾದಕ ವಸ್ತು ಬಳಕೆ ಮಾಡುತ್ತಿರುವುದು ಕಂಡುಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ತಿಳಿಸಿದರು.
ರಾಜ್ಯಸರ್ಕಾರ ಮಾದಕ ದ್ರವ್ಯದ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಹೊರರಾಜ್ಯಗಳಿಂದ ಕಳ್ಳಸಾಗಾಣಿಕೆ ಈಗ ನಿಯಂತ್ರಣದಲ್ಲಿದೆ ಎಂದರು.
3 ವರ್ಷದ ಹಿಂದೆ ತಾವು ವಾಕ್ ಫಾರ್ ವಾಟರ್ ಎಂದು ಮೇಕೆದಾಟುವಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಿದ್ದನ್ನು ಸ್ಮರಿಸಿಕೊಂಡರು. ಹಾಗೆಯೇ ರಾಹುಲ್‍ಗಾಂಧಿಯವರು ದೇಶದ ಐಕ್ಯತೆ, ನಿರುದ್ಯೋಗ ನಿವಾರಣೆ, ಬೆಲೆ ಏರಿಕೆ ವಿರುದ್ಧ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ್ ಜೋಡೋ ಯಾತ್ರೆ ನಡೆಸಿದರು.
ಸ್ವಾತಂತ್ರ್ಯೋವದ 75 ದಿನಾಚರಣೆಯ ವೇಳೆ ಫ್ರೀಡಂ ಮಾರ್ಚ್‍ನಲ್ಲಿ ರೈಲ್ವೆ ನಿಲ್ದಾಣದಿಂದ ಬಸವನಗುಡಿಯವರೆಗೂ ನಡೆಯಲಾಗಿತ್ತು. ಕಾಲ್ನಡಿಗೆಗಳು ಐತಿಹಾಸಿಕವಾಗಿ ಉಳಿಯಲಿವೆ.ಇವತ್ತು ಏರ್ಪಡಿಸಿರುವ ಮಾದಕ ವಸ್ತು ವಿರೋಧಿ ದಿನದ ಜಾಥಾ ಕೂಡಾ ಐತಿಹಾಸಿಕವಾಗಲಿದೆ ಎಂದರು.
ಶಾಲಾ-ಕಾಲೇಜುಗಳಿಂದ ಹಿಡಿದು ಎಲ್ಲೆಡೆ ವ್ಯಾಪಕ ಜನಜಾಗೃತಿಯಾಗಬೇಕು ಎಂದು ಹೇಳಿದರು.
ಶಾಸನ ರಚಿಸುವ ವಿಧಾನಸೌಧ ಮತ್ತು ನ್ಯಾಯಾಂಗದ ಪ್ರಮುಖ ಕಚೇರಿ ಹೈಕೋರ್ಟ್ ಎದುರು ಬದರು ಇರುವುದು ವಿಶ್ವದಲ್ಲೇ ಬೆಂಗಳೂರಿನಲ್ಲಿ ಮಾತ್ರ.
ಇಲ್ಲಿ ಉತ್ತಮ ವ್ಯವಸ್ಥೆ ಇದೆ. ಅದನ್ನು ಬಳಸಿಕೊಂಡು ಸಾಮಾಜಿಕ ಅನಿಷ್ಟಗಳ ವಿರುದ್ಧ ನಾವು ಹೋರಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಮಾದಕ ವಸ್ತು ವಿರೋಧಿ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಕಂಠೀರವ ಕ್ರೀಡಾಂಗಣದಲ್ಲಿ ಮಕ್ಕಳೊಂದಿಗೆ ಕುಳಿತು ಉಪಹಾರ ಸೇವಿಸಿದರು.
ಈ ಸಂದರ್ಭದಲ್ಲಿ ಯುವಜನ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ನಾಗರಾಜ್, ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.

