ಹುಬ್ಬಳ್ಳಿ: ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಮುಂದಿನ ದಿನದಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ನೋಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಹುಬ್ಬಳ್ಳಿಯ ವರೂರಿನ ಜೈನಮುನಿ ಗುಣಧರನಂದಿ ಮಾಹಾರಾಜ್ ಸ್ವಾಮೀಜಿಗಳ ಭೇಟಿ ಮಾಡಿದ ಬಳಿಕ ಮಾತನಾಡಿದರು.
ಜೈನ ಮುನಿಗಳ ಹತ್ಯೆ ಪ್ರಕರಣದಲ್ಲಿ ಯಾರೂ ರಾಜಕೀಯ, ತಾರತಮ್ಯ ಮಾಡುವುದಿಲ್ಲ. ಜೈನಮುನಿ ಹತ್ಯೆ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ನಮ್ಮ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನದಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.
ಘಟನೆ ಆದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ವರೂರಲ್ಲಿ ಜೈನ ಮುನಿಗಳು ಉಪವಾಸ ಕೂಳಿತಿದ್ದಾರೆ. ಅವರ ಬೇಡಿಕೆಗಳನ್ನು ಆಲಿಸುತ್ತೇನೆ ಎಂದು ತಿಳಿಸಿದರು.
ನಮ್ಮ ಗೃಹ ಇಲಾಖೆ ಸಮರ್ಥವಾಗಿದೆ. ಆರೋಪಿಗಳು ಪೊಲೀಸರ ವಶದಲ್ಲಿದ್ದು ತನಿಖೆ ಶುರುವಾಗಿದೆ. ಪ್ರಕರಣವನ್ನು ಸಿಬಿಐಗೆ ನೀಡುವ ಅಗತ್ಯ ಇಲ್ಲ. ಗೃಹ ಇಲಾಖೆಯೇ ಸಮರ್ಥವಾಗಿದೆ. ನಮ್ಮ ಇಲಾಖೆಯ ತನಿಖೆ ಮುಗಿದ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಆಗಲಿದೆ ಎಂದರು.
ಸುಮ್ಮನೆ ನಮ್ಮ ವಿರುದ್ಧ ಅಪವಾದ ಹೊರಿಸುವ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲ ಎಂದು ಪರಮೇಶ್ವರ್ ಟೀಕಿಸಿದರು.

