ಮೈಸೂರು: ಕಂದಾಯ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಅರಣ್ಯ ಮತ್ತು ಕಂದಾಯ ಭೂಮಿ ಜಂಟಿ ಸಮೀಕ್ಷೆ ನಡೆಸುವ ಮೂಲಕ ಕಾನೂನು ವ್ಯಾಪ್ತಿಯಲ್ಲಿ ಹಕ್ಕುಪತ್ರದ ಸಮಸ್ಯೆ ಪರಿಹರಿಸುತ್ತೇನೆ ಎಂದು ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.
ಹೆಗ್ಗಡ ದೇವನ ಕೋಟೆ
ಶಾಸಕ ಅನಿಲ್ ಚಿಕ್ಕಮಾದು ಮತ್ತಿತರರೊಂದಿಗೆ ಸಭೆ ನಡೆಸಿ ಜನರ ಅಹವಾಲು ಆಲಿಸಿದರು.
ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ 12 ಕುಟುಂಬಗಳು ಅರಣ್ಯ ವಾಸಿಗಳು ಎಂಬ ಬಗ್ಗೆ ಗೊಂದಲದ ಕುರಿತು ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಒದಗಿಸಲಾಗುವುದು.
ಈ ಬಗ್ಗೆ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಭೆ ನಡೆಸಿ, ಇಂತಹ ಸಮಸ್ಯೆ ಇರುವ ರಾಜ್ಯದ ಎಲ್ಲಾ ಹಾಡಿ, ಮುಳುಗಡೆ ಪ್ರದೇಶದ ಸಂತ್ರಸ್ತರ ಜಮೀನುಗಳ ಕುರಿತಂತೆ ಚರ್ಚಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಅವರು ತಮ್ಮ ಕ್ಷೇತ್ರದಲ್ಲಿ ಆನೆಗಳ ಹಾವಳಿ ಇದ್ದು ಕನಿಷ್ಠ 72 ಕಿಲೋಮೀಟರ್ ರೈಲ್ವೆ ಬ್ಯಾರಿಕೆಡ್ ನಿರ್ಮಿಸುವಂತೆ ಮಾಡಿದರು.
ಅದಕ್ಕೆ ಸ್ಪಂದಿಸಿದ ಖಂಡ್ರೆ, ಒಂದೇ ವರ್ಷದಲ್ಲಿ 72 ಕಿಲೋಮೀಟರ್ ಒಂದೇ ಭಾಗದಲ್ಲಿ ನಿರ್ಮಿಸಲು ಸಾಧ್ಯವಿಲ್ಲ, ಆದರೆ ಆನೆಗಳ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಆದ್ಯತೆಯ ಮೇರೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ತಿಳಿಸಿದರು.
ಕಬಿನಿ ವ್ಯಾಪ್ತಿಯ ಅಂತರಸಂತೆ ಅರಣ್ಯ ಪ್ರದೇಶದಲ್ಲಿ ಸೌರಬೇಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಪರಿಶೀಲಿಸಿದ್ದೇನೆ,ಜತೆಗೆ ಅರಣ್ಯದಲ್ಲೇ ವಾಸಿಸುವ ಆದಿವಾಸಿಗಳ ಸಮಸ್ಯೆಯನ್ನು ಆಲಿಸಿದ್ದಾಗಿ ತಿಳಿಸಿದರು.
ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅವರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ನಿಯಮಾನುಸಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಅರಣ್ಯ ಭೂಮಿಗೆ ಪರ್ಯಾಯವಾಗಿ ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬಂದ ಹವಾಲುಗಳನ್ನು ಸಚಿವ ಈಶ್ವರ ಖಂಡ್ರೆ ಪರಿಶೀಲಿಸಿದರು.
ಮಾಜಿ ಶಾಸಕ ಸಂದೇಶ್ ನಾಗರಾಜ್ ಅವರು ಈ ಸಭೆಯಲ್ಲಿ ಪಾಲ್ಗೊಂಡು ಅರಣ್ಯ ಹಕ್ಕು ಕಾಯ್ದೆಯ ಕುರಿತಂತೆ ಇರುವ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಹಿರಿಯ ಐಎಫ್ಎಸ್ ಅಧಿಕಾರಿಗಳಾದ ರಂಗರಾವ್, ಕುಮಾರ್ ಪುಷ್ಕರ್, ರಮೇಶ್ ಕುಮಾರ್, ಹರ್ಷಕುಮಾರ್ ಮತ್ತು ಎಚ್ ಡಿ ಕೋಟೆಯ ತಹಶೀಲ್ದಾರ್ ಸಭೆಯಲ್ಲಿ ಭಾಗವಹಿಸಿದ್ದರು.

