ಹಾವುಗಳ ಬಗ್ಗೆ ಭಯ ಬೇಡ: ಸ್ನೇಕ್ ಶಾಮ್

ಮೈಸೂರು: ಹಾವುಗಳೆಂದರೆ ಎಲ್ಲರಿಗೂ ಭಯ, ನಾವು ಅವುಗಳ ತಂಟೆಗೆ ಹೋದರೆ ಮಾತ್ರ ಅವು ತಮ್ಮ ರಕ್ಷಣೆಗಾಗಿ ತಿರುಗಿ ಬೀಳುತ್ತವೆ ಹಾವುಗಳ ಬಗ್ಗೆ ಭಯ‌ ಬಿಡಿ ಎಂದು ಉರಗ ರಕ್ಷಕ ಸ್ನೇಕ್ ಶಾಮ್ ತಿಳಿಸಿದರು.

ನಾವು ಹಲವಾರು ಬಗೆಯ ಹಾವುಗಳನ್ನು ಕಾಣುತ್ತೇವೆ, ಅವುಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಜೂನ್ 16 ವಿಶ್ವ ಹಾವುಗಳ ದಿನಾಚರಣೆ ಆಚರಿಸಲಾಗುತ್ತದೆ ಎಂದು ಹೇಳಿದರು.

ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮುಂಭಾಗ  ಹಾವುಗಳ ಬಗ್ಗೆ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಕೆಎಂಪಿ ಕೆ ಚಾರಿಟಬಲ್ ಟ್ರಸ್ಟ್ ಹಾಗೂ ಪರಿಸರ ಸ್ನೇಹಿ ತಂಡದ‌ ವತಿಯಿಂದ 86000 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಸಂರಕ್ಷಿಸಿದ ಉರಗ ರಕ್ಷಕ ಸ್ನೇಕ್ ಶಾಮ್ ಅವರನ್ನು ಅಭಿನಂದಿಸಲಾಯಿತು.

ಈ ವೇಳೆ ಮಾತನಾಡಿದ ಶ್ಯಾಮ್, ಹಾವುಗಳ ಬಗ್ಗೆ ಅನಗತ್ಯ ಭಯದಿಂದ ಅವುಗಳನ್ನು ಸಾಯಿಸಲಾಗುತ್ತಿದೆ. ಎಲ್ಲಾ ಹಾವುಗಳು ವಿಷಕಾರಿಯಲ್ಲ ಎಂದು ಮಾಹಿತಿ ನೀಡಿದರು.

ಅರಣ್ಯ ಇಲಾಖೆ ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಿರುವುದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ನಾಗರಹಾವು, ಕಾಳಿಂಗ ಸರ್ಪ ವಿಷಕಾರಿಯಾಗಿದ್ದು, ಹಪ್ಪಟೆ, ಕೇರೆ ಹಾವು, ಹಸಿರು ಹಾವು ಮುಂತಾದವು ವಿಷಕಾರಿಯಲ್ಲ.

ಕೆಲವು ಹಾವುಗಳು ಹೆಚ್ಚು ವಿಷಕಾರಿಯಲ್ಲದಿದ್ದರೂ, ಹಪ್ಪಟೆ ಹಾವು ಕಚ್ಚಿದರೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ಹಾವು ಕಚ್ಚಿದಾಗ ಬಹುತೇಕ ಜನರು ಭಯದಲ್ಲೇ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಹಾವು ಕಚ್ಚಿದಾಗ ವ್ಯಕ್ತಿಗೆ ಧೈರ್ಯ ತುಂಬಬೇಕು,ಶೀಘ್ರ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ತಿಳಿಸಿದರು

ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ಕೋವಿಡ್ ನಂತಹ ಕಷ್ಟ ಕಾಲದಲ್ಲೂ ಮನೆಗಳಿಗೆ ಹಾವು ಬಂದಾಗ ಸ್ನೇಕ್ ಶ್ಯಾಮ್ ರವರು ಬಂದು ಹಾವುನ್ನ ಸಂರಕ್ಷಿಸಿದ್ದಾರೆ ಎಂದು ಹೇಳಿದರು.

ಅಂತರಾಷ್ಟ್ರೀಯ ಉರಗತಜ್ಞ ಸ್ನೇಕ್ ಶ್ಯಾಮ್ ರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ, ಪರಿಸರ ಸಂರಕ್ಷಣೆ ಜೊತೆಯಲ್ಲೆ ಧಾರ್ಮಿಕ ಕೇಂದ್ರವನ್ನ ಸ್ಥಾಪಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಪರಿಸರ ಸಂರಕ್ಷಣೆ ವಿಚಾರವಾಗಿ ಪಠ್ಯಪುಸ್ತಕಗಳಲ್ಲಿ ಸ್ನೇಕ್ ಶ್ಯಾಮ್ ರವರ ಸೇವೆ ಮತ್ತು ಪರಿಸರ ಕಾಳಜಿಯ ವಿಷಯದ ಬಗ್ಗೆ ರಾಜ್ಯ ಸರ್ಕಾರ ಅಳವಡಿಸಿ ಸಣ್ಣಮಕ್ಕಳಲ್ಲಿ ಉರಗ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ವಿಕ್ರಮ ಅಯ್ಯಂಗಾರ್ ಮನವಿ ಮಾಡಿದರು

ಜಿ ರಾಘವೇಂದ್ರ, ಎಸ್. ಎನ್. ರಾಜೇಶ್, ರಾಕೇಶ್, ಪ್ರಸನ್ನ (ಅಪ್ಪಿ) ಬೈರತಿ ಲಿಂಗರಾಜು, ಹರೀಶ್ ನಾಯ್ಡು, ರವಿಚಂದ್ರ, ದುರ್ಗಾ ಪ್ರಸಾದ್, ಗಿರೀಶ್ , ರಾಮ್ ಮೂರ್ತಿ ಮತ್ತಿತರರು ಹಾಜರಿದ್ದರು.