ನವದೆಹಲಿ: ಕೋಟಿ ಕೋಟಿ ಮನಸುಗಳ ಕಾತರ, ಇಸ್ರೋ ವಿಜ್ಞಾನಿಗಳ ವರ್ಷಗಳ ಪರಿಶ್ರಮ, ದೇಶಾಭಿಮಾನಿಗಳ ಪ್ರಾರ್ಥನೆ, ಫಲ ನೀಡಿದ್ದು ಚಂದ್ರನ ದಕ್ಷಿಣ ಧೃವದಲ್ಲಿ ಚಂದ್ರಯಾನ -3 ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಕಾಲಿಟ್ಟಿದ್ದು ಪ್ರಪಂಚವೇ ನಿಬ್ಬರಗಾಗಿ ನೋಡುತ್ತಿತ್ತು.
ಬುಧವಾರ ಸಂಜೆ ಆರು ಗಂಟೆ ನಾಲ್ಕು ನಿಮಿಷದಲ್ಲಿ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುತ್ತಿದ್ದಂತೆ ಇಸ್ರೋ ವಿಜ್ಞಾನಿಗಳು ಚಪ್ಪಾಳೆ ತಟ್ಟಿ ಒಬ್ಬರಿಗೊಬ್ಬರು ಶುಭಾಶಯ ಹಂಚಿಕೊಂಡು ಸಂಭ್ರಮಿಸಿದರು.
ಇದೇ ವೇಳೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ಲಾಗಿ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಕಾಲಿಡುತ್ತಿದ್ದನ್ನು ಕಾತರದಿಂದ ಕಾದಿದ್ದು ಕಾಲಿಟ್ಟ ಕೂಡಲೇ ಭಾರತದ ಬಾವುಟವನ್ನು ಕೈಯಲ್ಲಿ ಹಿಡಿದು ಹಾರಿಸುತ್ತಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.
ನಂತರ ಪ್ರಧಾನಿ ಮೋದಿಯವರು ಇಸ್ರೋ ವಿಜ್ಞಾನಿಗಳಿಗೆ ಶುಭ ಹಾರೈಸಿದರು ಮತ್ತು ಹಲವು ವರ್ಷಗಳ ನಮ್ಮ ವಿಜ್ಞಾನಿಗಳ ಪರಿಶ್ರಮ ಇಂದು ಫಲ ನೀಡಿದೆ ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು
ಜುಲೈ 14ರಂದು ಚಂದ್ರಯಾನ 3 ಬಾಹ್ಯಾಕಾಶ ನೌಕೆ ಮಧ್ಯಾಹ್ನ 2.35ರ ಸಮಯದಲ್ಲಿ ಉಡಾವಣೆಯಾಯಿತು.
ಎಲ್ ವಿ ಎಂ ಫೋರ್ ಚಂದ್ರಯಾನ 3 ಯೋಜನೆಯ ಉಪಕರಣಗಳನ್ನು ಹೊತ್ತು ನಿರ್ದಿಷ್ಟ ಕಕ್ಷೆಗೆ ಸೇರಿತ್ತು.
ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನಲ್ಲಿ ಇಳಿದ ಕೂಡಲೇ ಇತ್ತ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿತ್ತು. ಸಣ್ಣ ಪುಟ್ಟ ಊರುಗಳಲ್ಲೂ ಕೂಡ ಪಟಾಕಿ ಸಿಡಿಸಿ ಖುಷಿ ಪಟ್ಟರಲ್ಲದೆ ವಿಜ್ಞಾನಿಗಳಿಗೆ ಜೈಕಾರ ಹಾಕಿದರು.
ಇಸ್ರೋದ ಮಹತ್ವದ ಚಂದ್ರಯಾನ 3 ಯಶಸ್ವಿಯಾಗಿದೆ.
ಚಂದ್ರಯಾನ 2 ರಿಂದ ಪಾಠ ಕಲಿತಿದ್ದ ಇಸ್ರೋ ಈ ಬಾರಿ ವಿಕ್ರಂ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲು ಎಲ್ಲಾ ಸಿದ್ಧತೆಗಳನ್ನು ಪೂರ್ವದಿಂದಲೇ ಮಾಡಿಕೊಂಡಿತ್ತು ಅದು ಈಗ ಫಲ ನೀಡಿತು
ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಕಾಲಿಟ್ಟ ಐತಿಹಾಸಿಕ ಕ್ಷಣವನ್ನು ಇಡೀ ವಿಶ್ವ ಕಾತರದಿಂದ ಕಾದಿದ್ದು ಐತಿಹಾಸಿಕ ಕ್ಷಣವನ್ನು ಕೋಟಿ ಕೋಟಿ ಜನ ಕಣ್ಣು ತುಂಬಿಕೊಂಡರು.
ಮನೆಯಲ್ಲಿರುವವರು ಟಿವಿ ಮುಂದೆ ಕುಳಿತು ಸಂಭ್ರಮ ಪಟ್ಟರೆ ಯುವಕರು ಮಕ್ಕಳು,ಮಹಿಳೆಯರು ಸ್ನೇಹಿತರೊಂದಿಗೆ ಸಂಭ್ರಮಿಸಿದರು.

