ಕಾವೇರಿ ವಿವಾದ: ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ನಿರ್ಧಾರ- ಸಿದ್ದರಾಮಯ್ಯ

ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯದ ರೈತರ ಹಿತ ಬಲಿ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕಾವೇರಿ, ಮೇಕೆದಾಟು, ಅಪ್ಪರ್​ ಕೃಷ್ಣ ಮತ್ತು ಮಹದಾಯಿ ವಿವಾದ ಸಂಬಂಧ ಕೇಂದ್ರದ ಬಳಿಗೆ ಸರ್ವ ಪಕ್ಷಗಳ ನಿಯೋಗ
ಕರೆದೊಯ್ಯಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ಬುಧವಾರ ಕಾವೇರಿ ನದಿ ನೀರಿನ ಹಂಚಿಕೆ ವಿವಾದ,ತಮಿಳುನಾಡು ಸರ್ಕಾರದ ಕ್ಯಾತೆ ಹಿನ್ನೆಲೆಯಲ್ಲಿ ಕರೆದಿದ್ದ ಸರ್ವಪಕ್ಷ ಸಭೆಯ ಬಳಿಕ ಸಿಎಂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಕರ್ನಾಟಕದ ನೀರಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊತ್ತೇವೆ. ಇದಕ್ಕೆ ಸರ್ವ ಪಕ್ಷಗಳು ಸಮ್ಮತಿ ಸೂಚಿಸಿವೆ ಎಂದು ತಿಳಿಸಿದರು.

ಸರ್ವಪಕ್ಷ ನಿಯೋಗ, ಕೇಂದ್ರ ಪರಿಸರ ಸಚಿವರನ್ನು ಸಹ ಭೇಟಿ ಮಾಡಲಿದ್ದು, ಮೇಕೆದಾಟು ಯೋಜನೆಗೆ ಅರಣ್ಯ ಪ್ರದೇಶದ ಕ್ಲಿಯರೆನ್ಸ್ ನೀಡಬೇಕೆಂದು ಮನವಿ ಮಾಡುತ್ತೇವೆ ಎಂದು ಹೇಳಿದರು.

ಜಲ ವಿವಾದ, ಭಾಷೆ ಗಡಿ ಬಗ್ಗೆ ರಾಜ್ಯದ ನಿಲುವು ತೆಗೆದುಕೊಳ್ಳುವಾಗ ಯಾವುದೇ ರಾಜಕೀಯ ಮಾಡಿಲ್ಲ. ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿಲುವುಗಳಿಗೆ ಬೆಂಬಲವಿದೆ ಎಂದು ಸರ್ವ ಪಕ್ಷದ ನಾಯಕರು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರೈತರ ರಕ್ಷಣೆ ನಮ್ಮ ಜವಾಬ್ದಾರಿಯಾಗಿದ್ದು, ಯಾವುದೇ ಕಾರಣಕ್ಕೂ ರೈತರ ಹಿತ ಬಲಿ ಕೊಡುವುದಿಲ್ಲ.

ಕಾವೇರಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್​​ನಲ್ಲಿ ಕರ್ನಾಟಕದ ಪರವಾಗಿ ಸಮರ್ಥವಾಗಿ ವಾದ ಮಂಡಿಸಲು ಸಲಹೆ ನೀಡಿದ್ದೇವೆ.

ತಮಿಳುನಾಡು ಅರ್ಜಿ ವಜಾ ಆಗುವಂತೆ ವಾದಮಾಡಿ ಎಂದಿದ್ದೇವೆ. ಬೆಳೆಗಳ ರಕ್ಷಣೆ ಮಾಡಬೇಕು, ಕುಡಿಯುವ ನೀರನ್ನೂ ಕೊಡಬೇಕು ಎಂದು ಸಿಎಂ ತಿಳಿಸಿದರು.

ಸಭೆಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ,ಎಸ್ ಯಡಿಯೂರಪ್ಪ, ಡಿ.ವಿ ಸದಾನಂದ ಗೌಡ ಎಚ್. ಡಿ ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಸಂಸದರಾದ ಡಿ.ಕೆ ಸುರೇಶ್, ತೇಜಸ್ವಿ ಸೂರ್ಯ, ಪಿ. ಸಿ ಮೋಹನ್, ಜಗ್ಗೇಶ್, ಸುಮಲತಾ ಸೇರಿದಂತೆ ರಾಜ್ಯದ ಸಚಿವರು, ಅಧಿಕಾರಿಗಳು ಪಾಲ್ಗೊಂಡಿದ್ದರು.