ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳಿಗೆ ಸಿಹಿ ತಿನ್ನಿಸಿ ಅಭಿನಂದಿಸಿದ ಸಿದ್ದರಾಮಯ್ಯ

ಬೆಂಗಳೂರು: ಚಂದ್ರಯಾನ-3 ಸಫಲವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ,ಇಸ್ರೋ ವಿಜ್ಞಾನಿಗಳ ತಂಡವನ್ನು ಅಭಿನಂದಿಸಿದರು.

ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿದಂತೆ ವಿಜ್ಞಾನಿಗಳು, ಸಿಬ್ಬಂದಿ ವರ್ಗದವರನ್ನು  ಸಿದ್ದರಾಮಯ್ಯ ಸನ್ಮಾನಿಸಿ ಇಸ್ರೋ ವಿಜ್ಞಾನಿಗಳಿಗೆ ಸಿಹಿ ತಿನಿಸಿ ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಇಸ್ರೋ ಅಧ್ಯಕ್ಷರು ಹಾಗೂ ವಿಜ್ಞಾನಿಗಳನ್ನು ಸರ್ಕಾರದ ವತಿಯಿಂದ ಗೌರವಿಸಲಾಗುತ್ತದೆ‌ ಎಂದು ತಿಳಿಸಿದರು.

ಸರ್ಕಾರದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಸನ್ಮಾನಿಸಲಾಗುವುದು ಎಂದು ಹೇಳಿದರು.

ಇಸ್ರೋ ವಿಜ್ಞಾನಿಗಳ ಈ ಸಾಧನೆ ನಮಗೆಲ್ಲ ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ನಾನು ಕೂಡ  ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ವೀಕ್ಷಣೆ ಮಾಡಿದೆ,ಬಹಳ ಖುಷಿ ಆಯಿತು, ನಮ್ಮ ವಿಜ್ಞಾನಿಗಳ ಬಗ್ಗೆ ಬಹಳ ಹೆಮ್ಮೆ ಎನಿಸಿತು.ಇದು ದೊಡ್ಡ ಸಾಧನೆ ಎಂದು ಕೊಂಡಾಡಿದರು.

ಹಲವು ವರ್ಷಗಳ ವಿಜ್ಞಾನಿಗಳ ಶ್ರಮಕ್ಕೆ ಫಲ ಸಿಕ್ಕಿದೆ, ನೂರಾರು ವಿಜ್ಞಾನಿಗಳ ಪರಿಶ್ರಮದ ಫಲ ಇದು ಎಂದು ಸಿಎಂ ಶ್ಲಾಘಿಸಿದರು.

ಇಸ್ರೋ ತಂಡವನ್ನು ಸನ್ಮಾನಿಸಲು ನಾವು ವಿಶೇಷ ಸಮಾರಂಭ ಮಾಡುತ್ತೇವೆ. ನಾವೆಲ್ಲ ಹೆಮ್ಮೆ ಪಡುವ ಸಾಧನೆ ಇದು. ಬಹಳ ಖುಷಿ ಕೊಡುವ ವಿಚಾರ. ವೈಯಕ್ತಿಕವಾಗಿ ನನಗೆ ತುಂಬಾ ಸಂತಸ ತಂದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಾಧನೆಯಲ್ಲಿ ಕರ್ನಾಟಕದ ವಿಜ್ಞಾನಿಗಳೂ ಸೇರಿದ್ದಾರೆ. ಭಾರತದಾದ್ಯಂತ ಸಾವಿರ ವಿಜ್ಞಾನಿಗಳು ಈ ಸಾಧನೆಯಲ್ಲಿ ಪಾಲ್ಗೊಂಡಿದ್ದಾರೆ ಇದು ವಿಸ್ಮಯ ಎಂದು ತಿಳಿಸಿದರು.