ವಿಕ್ರಮ್​ ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್; ಆ.23 ರಾಷ್ಟ್ರೀಯ ಬಾಹ್ಯಾಕಾಶ ದಿನ -ಪ್ರಧಾನಿ ಘೋಷಣೆ

ಬೆಂಗಳೂರು: ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು.

ವಿಜ್ಞಾನಿಗಳನ್ನು ಅಭಿನಂದಿಸಿದ ಮೋದಿಯವರು ವಿಕ್ರಮ್​ ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್ ಹಾಗೂ ಆಗಸ್ಟ್ 23ರ ದಿನವನ್ನ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದರು.

ಈ‌ ವೇಳೆ ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಚಂದ್ರಯಾನ-3  ಯಶಸ್ಸಿನಲ್ಲಿ ಇಸ್ರೋ ವಿಜ್ಞಾನಿಗಳ ಸಾಧನೆ ಐತಿಹಾಸಿಕ ದಾಖಲೆ ಎಂದು ಕೊಂಡಾಡಿದರು.

ಚಂದ್ರಯಾನ-3 ಯೋಜನೆಯ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆದ ದಿನವನ್ನು, ಅಂದರೆ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಚಂದ್ರಯಾನ-2 ಪತನ ಸ್ಥಳಕ್ಕೆ ತಿರಂಗ ಪಾಯಿಂಟ್ ಎಂದು ನಾಮಕರಣ ಮಾಡಿದ ಪ್ರಧಾನಿ,ಈ ತಿರಂಗ ಪಾಯಿಂಟ್​​​ ಮುಂದಿನ ಸಾಧನೆಗಳಿಗೆ ಪ್ರೇರಣೆಯಾಯಿತು ಎಂದು ಹೇಳಿದರು.

ಚಂದ್ರಯಾನ-3 ಯಶಸ್ಸಿನಲ್ಲಿ ಇಸ್ರೋ ಸಾಧನೆ ದೊಡ್ಡದು, ಮೇಕ್​ ಇನ್​ ಇಂಡಿಯಾ ಚಂದ್ರನವರೆಗೂ ತಲುಪಿದೆ, ವಿಜ್ಞಾನಿಗಳ ಸಾಧನೆ ದೇಶದ ಪ್ರತಿಯೊಬ್ಬರಿಗೂ ತಿಳಿಯಬೇಕಿದೆ.

ಚಂದ್ರಯಾನ-3 ರ ಯಶಸ್ಸಿನಿಂದ ಯುವ ಪೀಳಿಗೆಗೆ ನಿರಂತರವಾಗಿ ಪ್ರೇರಣೆ ಸಿಗಲಿದೆ ಎಂದು ಹೇಳಿದರು.

ಕೇಂದ್ರ, ರಾಜ್ಯ ಸರ್ಕಾರ ಸಹಯೋಗದಲ್ಲಿ ಬಾಹ್ಯಾಕಾಶ, ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿ ರಾಷ್ಟ್ರಮಟ್ಟದ ಹ್ಯಾಕಥಾನ್ ಆಯೋಜಿಸಲಾಗುವುದು ಎಂದು ಇದೇ ವೇಳೆ ‌ಮೋದಿ ತಿಳಿಸಿದರು.

ಇಸ್ರೋ ವಿಜ್ಞಾನಿಗಳು ಹಲವು ಉಪಗ್ರಹ ಉಡಾವಣೆ ಮಾಡಿದ್ದಾರೆ. ಈ ಉಪಗ್ರಹಗಳ ನೆರವಿನಿಂದ ಹಲವು ಕ್ಷೇತ್ರಗಳಿಗೆ ಅನುಕೂಲ ಆಗುತ್ತಿದೆ.

ಕೃಷಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಿಗೆ ಅನುಕೂಲವಾಗುತ್ತಿದೆ. ತಂತ್ರಜ್ಞಾನ ಬೆಳವಣಿಗೆಯಾದರೆ ದೇಶ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಪ್ರಧಾನಿ ಹೇಳಿದರು.