ಮನ್ ಕಿ ಬಾತ್ ೧೦೪ ನೇ ಸಂಚಿಕೆಯಲ್ಲಿ ಚಂದ್ರಯಾನ-3 ಯೋಜನೆಯ ಯಶಸ್ಸು ಪ್ರಸ್ತಾಪಿಸಿದ ಮೋದಿ

ನವ ದೆಹಲಿ: ಚಂದ್ರಯಾನ-೩ ಯೋಜನೆಯ ಯಶಸ್ಸು ನವ ಭಾರತದ ಚೈತನ್ಯದ ಸಂಕೇತ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬಣ್ಣಿಸಿದ್ದಾರೆ.

ಭಾನುವಾರ ಮಾಸಿಕ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ ೧೦೪ ನೇ ಸಂಚಿಕೆಯಲ್ಲಿ ಈ‌ವಿಷಯ ಪ್ರಸ್ತಾಪಿಸಿದ ಮೋದಿಯವರು,ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಯಶಸ್ವಿ ಚಂದ್ರಯಾನದಲ್ಲಿ ಅನೇಕ ಮಹಿಳಾ ವಿಜ್ಞಾನಿಗಳ ಪಾಲ್ಗೊಳ್ಳುವಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಯೋಜನೆಯ ಯಶಸ್ಸಿನೊಂದಿಗೆ ಭಾರತ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಯಶಸ್ಸಿನಲ್ಲಿ ಅನೇಕ ಮಹಿಳಾ ವಿಜ್ಞಾನಿಗಳು ಭಾಗಿಯಾಗಿರುವುದು ಸಂತಸದ ಸಂಗತಿ ಎಂದು ಕೊಂಡಾಡಿದರು.

ಇದೇ ವೇಳೆ, ವಿಶ್ವ ಸಂಸ್ಕೃತ ದಿನದ ಸಂದರ್ಭದಲ್ಲಿ ದೇಶದ ಜನರಿಗೆ ನರೇಂದ್ರ ಮೋದಿ ಶುಭ ಕೋರಿದರು.

ಸಂಸ್ಕೃತವು ವಿಜ್ಞಾನ ಮತ್ತು ವ್ಯಾಕರಣಕ್ಕೆ ಹೆಸರುವಾಸಿಯಾಗಿದೆ. ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಪ್ರಾಚೀನ ಭಾಷೆ ಉತ್ತೇಜಿಸುವ ಅಗತ್ಯವಿದೆ ಎಂದು ಹೇಳಿದರು.

ಸಂಸ್ಕೃತ ವಿಶ್ವವಿದ್ಯಾಲಯಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ,ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ,ಜತೆಗೆ ಜನರಲ್ಲಿ ದೇಶಪ್ರೇಮದ ಮನೋಭಾವ ಉತ್ತುಂಗದಲ್ಲಿದೆ ಎಂದು ತಿಳಿಸಿದರು.

ಪ್ರಧಾನಿಯವರು ರಾಷ್ಟ್ರದ ವೈವಿಧ್ಯತೆಯನ್ನು ಅನ್ವೇಷಿಸಲು ಜನರಿಗೆ ಕರೆ ನೀಡಿದರು.ಇದೇ ವೇಳೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಲ್ಲಿ ಕಾರ್ಯಪ್ರವೃತ್ತರಾಗಿರುವ ಎಲ್ಲರನ್ನೂ ಶ್ಲಾಘಿಸಿದರು.