ಕಾಂಗ್ರೆಸ್ ನಿಂದ ಹೋದವರಷ್ಟೇ ಅಲ್ಲಾ ಯಾರೇ ಬಂದರೂ‌ ಸ್ವಾಗತ: ಸಿಎಂ ‌ಸಿದ್ದು ನೇರ‌ ಆಹ್ವಾನ

ಮೈಸೂರು: ನಮ್ಮ ಪಕ್ಷದಿಂದ ಹೊರ ಹೋದವರು ಮಾತ್ರವಲ್ಲ,
ಕಾಂಗ್ರೆಸ್ ಗೆ ಯಾರೇ ಬಂದರೂ ಸ್ವಾಗತ‌ವಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ.

ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಇದೇ 30ರಂದು ಚಾಲನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬೆಳಿಗ್ಗೆ ರಸ್ತೆ ಮಾರ್ಗವಾಗಿ ಮೈಸೂರಿಗೆ ಆಗಮಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್. ಸಿ ಮಹ್ದದೇವಪ್ಪ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸೇರಿದಂತೆ ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದರು.

ನಂತರ ಸಿಎಂ ಸಿದ್ದರಾಮಯ್ಯ ಅವರಿಗೆ ಪೊಲೀಸರು ಗೌರವ ವಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿದ್ದರಾಮಯ್ಯ ಮಾತನಾಡಿದರು.

ಆಪರೇಷನ್ ಹಸ್ತ‌ ನಡೆಸಲಾಗುತ್ತಿದೆಯೆ
ಎಂಬ ಪ್ರಶ್ನೆಗೆ ಆಪರೇಷನ್ ಅಂತದ್ದೇನಿಲ್ಲಾ,ಪಕ್ಷ‌ ಬಿಟ್ಟು ಹೋಗಿರೋರೂ ಸೇರಿದಂತೆ ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರಬಹುದು ಅಂತವರಿಗೆಲ್ಲರಿಗೂ ಸ್ವಗತವಿದೆ ಎಂದು ನೇರವಾಗಿಯೇ ಹೇಳಿದರು.

ಬಿಜೆಪಿ ಕುರಿತು ಕೇಳಿದ ಪ್ರಶ್ನೆಗೆ ರಾಜ್ಯದಲ್ಲಿ ಬಿಜೆಪಿ ಎಲ್ಲಿದೆರೀ,
ರಾಜ್ಯದಲ್ಲಿ ಆ ಪಕ್ಷ ದಿವಾಳಿಯಾಗಿದೆ,
ಇದುವರೆಗೆ ವಿಪಕ್ಷ ನಾಯಕನನ್ನೂ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಪ್ರಧಾನಿ ಮೋದಿಯವರು ಬಿಜೆಪಿ ನಾಯಕರನ್ನ ಭೇಟಿ ಮಾಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ,
ಮೋದಿನೇ ಇವರನ್ನ ಭೇಟಿಗೆ ಬರಬೇಡಿ ಅಂದಿದ್ರತೆ ಎಂದು ವ್ಯಂಗ್ಯವಾಡಿದರು.

ಇಂದಿನಿಂದ ಮೂರು ದಿನಗಳು ಮೈಸೂರು ಪ್ರವಾಸ ಕೈಗೊಂಡಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿವೆ. ಸರ್ಕಾರ ಘೋಷಿಸಿದ 4 ನೇ ಗ್ಯಾರೆಂಟಿ ಗೃಹಲಕ್ಷ್ಮಿ ಯೋಜನೆಗೆ ಆ. 30 ರಂದು ಚಾಲನೆ ನೀಡಲಾಗುತ್ತಿದೆ, ಒಂದು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳಲಿದ್ದಾರೆ ಎಂದು ತಿಳಿಸಿದರು.

ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಿಂದ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮಕ್ಕೆ ಆಗಮಿಸುವರು ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಬರದ ಛಾಯೆ ಇದೆಯಲ್ಲಾ ಮೋಡ ಬಿತ್ತನೆ ಮಾಡುವ ಚಿಂತನೆ ಇದೆಯೇ ಎಂಬ ಪ್ರಶ್ನೆಗೆ,ಮೋಡ ಬಿತ್ತನೆ ಯಾವ ಕಾಲದಲ್ಲೂ ಯಶಸ್ವಿಯಾಗಿಲ್ಲ.
ಮೋಡ ಬಿತ್ತನೆಯಿಂದ ಯಾವುದೇ ಪ್ರಯೋಜನೆ ಇಲ್ಲ ಎಂದು ಹೇಳಿದರು.

ಬರ ಪರಿಸ್ಥಿತಿ ಎದುರಿಸಲು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ.
ಬರ ಪೀಡಿತ ಪ್ರದೇಶ ಘೋಷಣೆ ನಂತರ ಕ್ರಮ ಕೈಗೊಳ್ಳಲಾಗುವುದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.