ಮೈಸೂರು ದಸರಾ ಹಂಸಲೇಖರಿಂದ ಉದ್ಘಾಟನೆ‌:ಸಿಎಂ

ಮೈಸೂರು: ಈ ಬಾತಿ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಯನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ವಿಶ್ವವಿಖ್ಯಾತ ಮೈಸೂರು ದಸರಾವನ್ನು ಅ. 15ರಂದು ಬೆಳಿಗ್ಗೆ 10.15ರಿಂದ 10.30ರ ಒಳಗಿನ ಶುಭ ಲಗ್ನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸುವರು ಎಂದು ಹೇಳಿದರು.

ಈ ಬಾರಿಯ ಮೈಸೂರು ದಸರಾ ಉದ್ಘಾಟಕರ ಹೆಸರನ್ನು ಅಂತಿಮಗೊಳಿಸುವ ತೀರ್ಮಾನವನ್ನು ಸಚಿವ ಸಂಪುಟ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿವೇಚನೆಗೆ ಬಿಟ್ಟಿತ್ತು.

ಅದರಂತೆ ಮುಖ್ಯಮಂತ್ರಿಗಳು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಹೆಸರನ್ನು ಅಂತಿಮಗೊಳಿಸಿ ಅವರೇ ಉದ್ಘಾಟಕರ ಹೆಸರನ್ನು ಘೋಷಣೆ ಮಾಡಿದ್ದಾರೆ.

ನಾಡ ಹಬ್ಬ ದಸರಾ ಅ.15 ರಿಂದ ಆರಂಭಗೊಳ್ಳಲಿದ್ದು,10 ದಿನಗಳ ಕಾಲ ದಸರಾ ವೈಭವೋಪೇತವಾಗಿ ನಡೆಯಲಿದೆ.

ವಿಜಯದಶಮಿ ದಿನ ನಾಡದೇವತೆ ಚಾಮುಂಡೇಶ್ವರಿಯ ಜಂಬೂಸವಾರಿಯೊಂದಿಗೆ ದಸರಾ ಮುಕ್ತಾಯಗೊಳ್ಳಲಿದೆ.

ಈ ಬಾರಿಯ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಯುವ ದಸರಾ, ರೈತರ ದಸರಾ ಹೀಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿಎಂ ತಿಳಿಸಿದರು.

ಮೈಸೂರು ದಸರಾಗೆ ಸಿದ್ಧತೆಗಳು ಪ್ರಾರಂಭವಾಗಿವೆ, ಮೈಸೂರು ದಸರಾಗೆ ಅಗತ್ಯ ಅನುದಾನವನ್ನು ಒದಗಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.