ಮೈಸೂರು: ನಾಡ ದೇವತೆ ಚಾಮುಂಡಿ ದೇವಿ ಹಾಗೂ ರಾಜ್ಯದ ಜನರ ಆಶೀರ್ವಾದದಿಂದ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಚುನಾವಣೆಗೂ ಮುನ್ನ ದೇವಿ ಸನ್ನಿಧಾನದಲ್ಲಿ ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ನಡೆದಿದೆ. ನುಡಿದಂತೆ ನಡೆದಿರುವುದು ಈ ಸರ್ಕಾರದ ಸಾಧನೆ ಎಂದು ಹೇಳಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದೊಗೆ ಮಾತನಾಡಿದ ಶಿವಕುಮಾರ್,ಈ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಸನ್ನಿದಾನದಲ್ಲಿ ಚುನಾವಣೆಗೂ ಮುಂಚೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಇಟ್ಟು ಪೂಜೆ ಸಲ್ಲಿಸಿದ್ದೆವು ಎಂದು ಹೇಳಿದರು.
1.10 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ತಲುಪಲಿದೆ, 1.41 ಲಕ್ಷ ಮನೆಗಳಿಗೆ ಗೃಹಜ್ಯೋತಿ ಯೋಜನೆ ತಲುಪಿದೆ, ಶೂನ್ಯ ವಿದ್ಯುತ್ ಬಿಲ್ ಬಂದಿದೆ, 46 ಕೋಟಿ ಹೆಣ್ಣು ಮಕ್ಕಳು ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. 1.39 ಕೋಟಿ ಕುಟುಂಬಗಳಿಗೆ ಅನ್ನಭಾಗ್ಯದ ಪ್ರಯೋಜನ ತಲುಪಿದೆ ನೂರು ದಿನದಲ್ಲಿ ಸಾಕಷ್ಟು ಸಾಧನೆಗಳನ್ನು ನಾವು ಮಾಡಿದ್ದೇವೆ ಎಂದು ತಿಳಿಸಿದರು.
ನೂರು ದಿನಗಳಲ್ಲಿ ನಮ್ಮ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಭರ್ಜರಿ ಕೊಡುಗೆಗಳನ್ನು ನೀಡಿದೆ. ಈ ದೇವಿ ಹಾಗೂ ನಮ್ಮ ನಡುವಣ ಸಂಬಂಧ ಭಕ್ತ ಹಾಗೂ ಭಗವಂತನ ನಡುವಿನ ಸಂಬಂಧ. ನಮ್ಮ ಬೇಡಿಕೆ ಏನಿದೆ ಅದನ್ನು ದೇವಿ ಈಡೇರಿಸಿದ್ದಾಳೆ ಎಂದರು.
ಮೈಸೂರು ಭಾಗದ ಜನತೆ ನಮ್ಮ ಸರ್ಕಾರ ರಚನೆಗೆ ಹೆಚ್ಚಿನ ಶಕ್ತಿ ಕೊಟ್ಟಿದ್ದಾರೆ. ರಾಜ್ಯದ ಮಹಿಳೆಯರಿಗೆ ದೇವಿ ಚಾಮುಂಡೇಶ್ವರಿಯ ಆಶೀರ್ವಾದ ಇರಲಿ ಎಂದು ಗೃಹಲಕ್ಷ್ಮೀ ಯನ್ನು ಇಲ್ಲಿ ಪ್ರಾರಂಭ ಮಾಡುತ್ತಿದ್ದೇವೆ. ಸುಮಾರು 12,600 ಕಡೆ ಈ ಕಾರ್ಯಕ್ರಮ ನೇರಪ್ರಸಾರವಾಗಲಿದೆ ಎಂದು ಡಿಕೆಶಿ ವಿವರಿಸಿದರು.
ವಿರೋಧ ಪಕ್ಷಗಳು ಸಿಎಂ ಹಾಗೂ ನಿಮ್ಮ ನಡುವಿನ ಸಂಬಂಧಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರಲ್ಲಾ ಎಂವ ವರದಿಗಾರರ ಪ್ರಶ್ನೆಗೆ ಅವರು ಅನುಮಾನ ಪಡುತ್ತಲೇ ಇರಲಿ, ನಾವು ಒಂದಾಗಿರುವುದನ್ನು ನೀವೆಲ್ಲಾ ನೋಡುತ್ತಲೇ ಇರಿ ಎಂದು ನಗುತ್ತಾ ನುಡಿದರು.
ಅವರು ಅನುಮಾನ ಪಟ್ಟಷ್ಟು ನಾವಿಬ್ಬರು ಹತ್ತಿರ ಆಗುತ್ತಲೇ ಇದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒಟ್ಟಿಗೇ ಹೇಳಿದರು.
ಕಾವೇರಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನಾವು ನಮ್ಮ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಬರದಂತೆ ನೋಡಿಕೊಳ್ಳುತ್ತೇವೆ ಎಂದು ಅಭಯ ನೀಡಿದರು.

