ಭಾರತದ ಎಲ್ಲಾ ರಾಜ್ಯಗಳಲ್ಲೂ ಕರ್ನಾಟಕ ಮಾದರಿ ಗ್ಯಾರಂಟಿ ಯೋಜನೆಗಳು ಜಾರಿಗೆ-ರಾಹುಲ್ ಗಾಂಧಿ ಭರವಸೆ

ಮೈಸೂರು: ಭಾರತದ ಎಲ್ಲಾ ರಾಜ್ಯಗಳಲ್ಲೂ ಕರ್ನಾಟಕದಲ್ಲಿ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದೆಂದು ಜನತೆಗೆ ಭರವಸೆ ನೀಡಿದ್ದೆವು. ಅದರಂತೆ ಈಗಾಗಲೇ ನಾಲ್ಕು ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಇಂದು ಮಹಿಳೆಯರಿಗೆ ನೀಡಲಾಗುವ 2000 ರೂ ಗೃಹಲಕ್ಷ್ಮೀ ಯೋಜನೆಯನ್ನು ಸಹ ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ನಾವು ಈ ಘೋಷಣೆಯನ್ನು ಮಾಡಿದಾಗ ಕೇಂದ್ರ ಸರ್ಕಾರ ಇದನ್ನು ವಿರೋಧಿಸಿ ಕಾಂಗ್ರೆಸ್ ಇದನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಟೀಕಿಸಿತ್ತು, ಆದರೆ ನಾವಿಂದು ಈ ಯೋಜನೆಯನ್ನು ಜಾರಿಗೆ ತಂದು ಯಶಸ್ವಿಗೊಳಿಸಿದ್ದೇವೆ ಇದು ನಮಗೆ ಸಂತಸ ತಂದಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿನ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಹಾಗಾಗಿ ನುಡಿದಂತೆ ನಡೆದ ಸರ್ಕಾರ ವಾಗುದೆ. ಕೊಟ್ಟ ಭರವಸೆಯನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ರಕ್ಷಾಬಂಧನದ ದಿನದಂದೇ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿ ಈಡೇರಿಸಿದ್ದೇವೆ ಎಂದು ಹೇಳಿದರು.

ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಕೇವಲ ಕೋಟ್ಯಾಧಿಪತಿಗಳ ಪರ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರ ಬಡವರು ಹಿಂದುಳಿದವರು ದಲಿತರು ಎಲ್ಲರನ್ನು ಒಟ್ಟಿಗೆ ಕರೆದೊಯ್ಯಲಿದೆ ಹಾಗೆಯೇ ಯಾರೂ ಹಸಿವಿನಿಂದ ಉಳಿಯಬಾರದು ಎಂದು ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ನಾನು ಭಾರತ್ ಜೋಡೊ ಯಾತ್ರೆ ಮಾಡಿದಾಗ ದೇಶಾದ್ಯಂತ ಹಲವಾರು ಮಂದಿ ಮಹಿಳೆಯರನ್ನು ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿದ್ದೆ.

ಅದೇ ರೀತಿ ಕರ್ನಾಟಕದಲ್ಲಿಯೂ ಮಹಿಳೆಯರನ್ನು ಭೇಟಿ ಮಾಡಿ ಮಾತನಾಡಿಸಿದೆ ಅವರುಗಳು ರಾಜ್ಯದಲ್ಲಿ ಬೆಲೆ ಏರಿಕೆ ತೈಲ ಬೆಲೆ ಏರಿಕೆ ಇವುಗಳಿಂದ ಜೀವನಕ್ಕಡ ತೊಂದರೆ ಆಗಿದೆ ಎಂದು ಹೇಳಿದರು ಇದನ್ನು ಮನಗೊಂಡ ನಾನು ಮಹಿಳೆಯರಿಗಾಗಿ ಈ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಬೇಕೆಂದು ನಮ್ಮ ಕಾಂಗ್ರೆಸ್ ಪಕ್ಷದವರಿಗೆ ಸೂಚಿಸಿದೆ ಹಾಗಾಗಿ ಈಗ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ರಾಹುಲ್ ತಿಳಿಸಿದರು.