ಇಂದಿರಾ ಗಾಂಧಿ ಅವರ ಕಾಲದ ಗತ ವೈಭವ ಮರುಸೃಷ್ಟಿಯಾಗಿದೆ-ಗೃಹಲಕ್ಷ್ಮೀ ಯೋಜನೆ‌ ಬಗ್ಗೆ ಡಿ.ಕೆ ಶಿವಕುಮಾರ್ ‌ಬಣ್ಣನೆ

ಮೈಸೂರು: ರಾಜ್ಯದ ಸುಮಾರು 1.10 ಕೋಟಿ ತಾಯಂದಿರು ಇಂದು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಿದ್ದಾರೆ. ಆಮೂಲಕ ಇಂದಿರಾ ಗಾಂಧಿ ಅವರ ಕಾಲದ ಗತ ವೈಭವ ಮರುಸೃಷ್ಟಿಯಾಗಿದೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ‌ಯೋಜನೆ ಚಾಲನೆ ವೇಳೆ ಅವರು ಮಾತನಾಡಿದರು.

ಇಡೀ ದೇಶದಲ್ಲಿ ಬದಲಾವಣೆ ಗಾಳಿ ಆರಂಭವಾಗಿದೆ. ರಾಹುಲ್ ಗಾಂಧಿ ಅವರು ಇದೇ ಭೂಮಿ ಮೇಲೆ ಭಾರತ ಜೋಡೋ ಯಾತ್ರೆ ಮಾಡಿದ್ದರು. ಚಾಮರಾಜನಗರದಿಂದ ರಾಯಚೂರು ವರೆಗೂ 510 ಕಿ.ಮೀ ಹೆಜ್ಜೆ ಹಾಕಿದರು. ರಾಜ್ಯದ ಮೂಲೆ ಮೂಲೆಯಿಂದ ನೀವು ಬಂದು ಶಕ್ತಿ ತುಂಬಿದಿರಿ ಎಂದು ಹೇಳಿದರು.

ಈ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ನಿಮ್ಮ ಹಸಿವು, ಬೆಲೆ ಏರಿಕೆ, ರೈತರ ಸಮಸ್ಯೆ, ಯುವಕರ ನಿರುದ್ಯೋಗ ಸಮಸ್ಯೆಗಳನ್ನು ಕಂಡರು. ಇವುಗಳಿಗೆ ಪರಿಹಾರ ಕಂಡುಹಿಡಿಯುವಂತೆ ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಸೂಚಿಸಿದರು. ಸೋನಿಯಾ ಗಾಂಧಿ ಅವರು ಕೂಡ ಈ ಯಾತ್ರೆಯಲ್ಲಿ ಭಾಗವಹಿಸಿ ಹೆಜ್ಜೆ ಹಾಕಿದರು. ಈ ಸಮಯದಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ದೇಶದ ಜನ ಆಯ್ಕೆ ಮಾಡಿದರು ಎಂದು ತಿಳಿಸಿದರು.

ನಂತರ ನಡೆದ ಚುನಾವಣೆ ಸಮಯದಲ್ಲಿ ನಾವು ರಾಜ್ಯದ ಜನರ ಮುಂದೆ ಐದು ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟಿದ್ದೆವು. ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ 2 ಸಾವಿರ ಮಾಸಿಕ ಪ್ರೋತ್ಸಾಹ ಧನ, ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ, ಯುವನಿಧಿ ಮೂಲಕ ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ರಾಜ್ಯದೆಲ್ಲೆಡೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಬಸ್ ಸಂಚಾರ ಘೋಷಣೆ ಮಾಡಿದೆವು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ ಎಂದು ಡಿಕೆಶಿ ತಿಳಿಸಿದರು.

ಚುನಾವಣೆಗೂ ಮುನ್ನ ನಾಡ ದೇವತೆ ತಾಯಿ ಚಾಮುಂಡೇಶ್ವರಿ ಸನ್ನಿದಾನಕ್ಕೆ ನಾನು ಸಿದ್ದರಾಮಯ್ಯ ಅವರು ಬಂದು ನಮ್ಮ ಗ್ಯಾರಂಟಿ ಕಾರ್ಡ್ ಇಟ್ಟು ಪೂಜೆ ಮಾಡಿಸಿ ಈ ಯೋಜನೆ ಜಾರಿಗೊಳಿಸಲು ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡಿದೆವು. ಇಂದು ಎಲ್ಲಾ ಗೃಹಲಕ್ಷ್ಮಿಯರ ಖಾತೆಗೆ ನೇರವಾಗಿ ಹಣ ತಲುಪುವಂತೆ ಮಾಡಲಾಗಿದೆ.

ಈ ಮೂಲಕ ದೇಶಕ್ಕೆ ಕರ್ನಾಟಕ ಮಾದರಿಯನ್ನು ಪರಿಚಯಿಸಿದ್ದೇವೆ ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಣೆ ನೀಡಿದರು.

ನೀವು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೀರಿ, ನಾವು ದೇಶದಲ್ಲೇ ಯಾವುದೇ ಸರ್ಕಾರ ಮಾಡಲಾಗದ ಕೆಲಸವನ್ನು ಕೇವಲ 100 ದಿನಗಳಲ್ಲಿ ನಾವು ಮಾಡಿ ತೋರಿಸಿದ್ದೇವೆ,ಆ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಮಹಿಳೆಯರನ್ನುದ್ದೇಶಿಸಿ ಡಿ.ಕೆ.ಶಿವಕುಮಾರ್ ‌ತಿಳಿಸಿದರು.