ಮಾನವನಾಗಿ ಹುಟ್ಟಿದ ಕೃಷ್ಣ ಯಾವತ್ತೂ ಕೈಯಲ್ಲಿ ಶಸ್ತ್ರ ಹಿಡಿಯದೆ ದೈವತ್ವಕ್ಕೆ ಏರಿದ:ಸಿಎಂ ಬಣ್ಣನೆ

ಬೆಂಗಳೂರು: ಧರ್ಮಕ್ಕೋಸ್ಕರ ಮನುಷ್ಯ ಅಲ್ಲ. ಮನುಷ್ಯನಿಗಾಗಿ ಧರ್ಮ ಇದೆ. ಮಾನವನಾಗಿ ಹುಟ್ಟಿದ ಕೃಷ್ಣ ಯಾವತ್ತೂ ಕೈಯಲ್ಲಿ ಶಸ್ತ್ರ ಹಿಡಿಯದೆ ದೈವತ್ವಕ್ಕೆ ಏರಿದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿಯ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಧರ್ಮ. ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ದ್ವೇಷಿಸುವುದು ಅಧರ್ಮ. ಮನುಷ್ಯ ದ್ವೇಷದ ಅಧರ್ಮದ ವಿರುದ್ಧವೇ ಕೃಷ್ಣ ಕೈಯಲ್ಲಿ ಶಸ್ತ್ರ ಹಿಡಿಯದೆ ಹೋರಾಡಿ ಧರ್ಮ ಸ್ಥಾಪನೆ ಮಾಡಿದ ಎಂದು ಹೇಳಿದರು.

ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸು ಕೂಡ ಮನುಷ್ಯ ಪ್ರೀತಿಯ ಸಮಾನತೆಯ ಸಮಾಜ ಸೃಷ್ಟಿ ಆಗಬೇಕು ಎನ್ನುವುದಾಗಿತ್ತು.

ಸ್ವತಂತ್ರ ಭಾರತಕ್ಕೆ ಸಂವಿಧಾನ ಕೊಟ್ಟ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವೂ ಇದೇ ಆಗಿತ್ತು.

ಹೀಗಾಗಿ ಸಂವಿಧಾನವನ್ನು ರಕ್ಷಿಸುವವರ ಕೈಯಲ್ಲಿ ಅಧಿಕಾರ ಇರಬೇಕು. ಸಂವಿಧಾನ ವಿರೋಧಿಗಳ ಕೈಗೆ ದೇಶದ ಅಧಿಕಾರವನ್ನು ನೀಡಿ ಪರಿತಪಿಸಬೇಡಿ ಎಂದು ಕಿವಿಮಾತು ಹೇಳಿದರು.

ಯಾದವ ಸಮುದಾಯದ ಪ್ರತಿಯೊಬ್ಬರೂ ಶಿಕ್ಷಣ ಪಡೆದಾಗ ಮಾತ್ರ ತಾರತಮ್ಯದಿಂದ ಹೊರಗೆ ಬರಬಹುದು. ಶಿಕ್ಷಣದ ಮೂಲಕ ಅಸಮಾನತೆಯನ್ನು ತೊಡೆದು ಹಾಕಬಹುದು. ಯಾದವ ಸಮುದಾಯದ ಯಾರೊಬ್ಬರೂ ಶಾಸಕರಾಗಿ ಗೆಲ್ಲದ ಕಾರಣದಿಂದ ನಾನು ಈ ಸಮುದಾಯಕ್ಕೆ ಸೇರಿದ ನಾಗರಾಜ ಯಾದವರನ್ನು ಕರೆದು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೆ. ಇದೇ ರೀತಿ ಸಮುದಾಯದ ಹಲವು ಮಂದಿಗೆ ನಾನಾ ರೀತಿಯ ರಾಜಕೀಯ ಪ್ರಾತಿನಿಧ್ಯ , ಅವಕಾಶಗಳನ್ನು ನಾನು ಒದಗಿಸಿದ್ದೇನೆ ಎಂದು ತಿಳಿಸಿದರು.

ಯಾದವ ಸಮುದಾಯದ ಒಬ್ಬರನ್ನು ಕೆಪಿಎಸ್ ಸಿ ಸದಸ್ಯರನ್ನಾಗಿ ಮಾಡಿ ಎನ್ನುವ ಬೇಡಿಕೆ ಇದೆ. ಮುಂದೆ ಅವಕಾಶ ಒದಗಿಸುತ್ತೇನೆ. ನಾನು ಸಾಮಾಜಿಕ ನ್ಯಾಯದಿಂದ ವಂಚಿತರಾದ ಎಲ್ಲಾ ಜಾತಿ ಸಮುದಾಯಗಳ ಪರವಾಗಿ ನಾನು ಇರುತ್ತೇನೆ‌ ಎಂದು ಸಿಎಂ ಭರವಸೆ ನೀಡಿದರು.

ಚಿತ್ರದುರ್ಗ ಜಿಲ್ಲೆ ಶ್ರೀ ಕೃಷ್ಣ ಯಾದವ ಮಹಾಸಂಸ್ಥಾನ ಮಠದ ಯಾದವಾನಂದ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ವಿಧಾನ‌ ಪರಿಷತ್ ಸದಸ್ಯ ನಾಗರಾಜ್ ಯಾದವ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ನಸೀರ್ ಅಹಮದ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿಯನ್ನು‌ ಉದ್ಘಾಟಿಸಿದರು.

ಕಾರ್ಯಕ್ರಮದ ವೇಳೆ‌ ಶ್ರೀ ಕೃಷ್ಣ‌ ವೇಷಧಾರಿಯೊಂದಿಗೆ ಸಿದ್ದರಾಮಯ್ಯ ‌ನಗುತ್ತಾ ಮಾತನಾಡಿಸಿ ಎಲ್ಲಿ ಕೊಳಲು ನುಡಿಸಿ‌ ಎಂದು ನಗೆ ಚಾಟಿ‌ ಹಾರಿಸಿದರು.