ಲೋಕಸಭೆ ಚುನಾವಣೆ; ಜೆಡಿಎಸ್  ಸಭೆ:ಮುಖಂಡರ ಜತೆ‌ ಎಚ್ ಡಿ ಡಿ, ಎಚ್ ಡಿ ಕೆ  ಸಮಾಲೋಚನೆ

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು.

ರಾಜ್ಯದ ಜನರು ಎದುರಿಸುತ್ತಿರುವ ಸಮಸ್ಯೆಗಳು, ಸಂಘಟನೆ ಬಗ್ಗೆಯೂ ‌ಚರ್ಚಿಸಲಾಯಿತು.

ಕುಮಾರಸ್ವಾಮಿ ‌ಸಭೆಯಲ್ಲಿ ಮುಖಂಡರಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು.

ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಬಂಡೆಪ್ಪ ಕಾಶೆಂಪೂರ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲಾ ಹಾಲಿ ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು, ಜಿಲ್ಲಾಧ್ಯಕ್ಷರು ಪಾಲ್ಗೊಂಡಿದ್ದರು.

ಕಾವೇರಿ ಜಲ ಸಂಕಷ್ಟ, ಬರಗಾಲ ಹಾಗೂ ಅಘೋಷಿತ ಲೋಡ್ ಶೆಡ್ಡಿಂಗ್ ಬಗ್ಗೆಯೂ ಚರ್ಚೆ ನಡೆಯಿತಲ್ಲದೆ, ಜನಪರ ವಿಷಯಗಳನ್ನು ಇಟ್ಟುಕೊಂಡು ಸರಕಾರದ ವಿರುದ್ಧ ಹೋರಾಟ ರೂಪಿಸಬೇಕು ಎಂದು ಇಬ್ಬರೂ ನಾಯಕರು ಪಕ್ಷದ ಮುಖಂಡರಿಗೆ ಸಲಹೆ ನೀಡಿದರು.

ಜೆಡಿಎಸ್ ಪಕ್ಷ ಬಲಿಷ್ಟವಾಗಿದೆ. ಅದನ್ನು ದುರ್ಬಲಗೊಳಿಸುವ ದುಷ್ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ, ನಿಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಅದನ್ನು ನೋಡಿಯೇ ನೋಡುತ್ತೇನೆ. ಈ ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳಲು ಅವಿರತವಾಗಿ  ಹೋರಾಟ ಮಾಡುತ್ತೇನೆ ಎಂದು ದೇವೇಗೌಡರು ಕಡಾಖಂಡಿತವಾಗಿ ಹೇಳಿದರು.

ಸೆ.10ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ: ಮುಂಬರುವ ಲೋಕಸಭೆ, ಬಿಬಿಎಂಪಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಸೆ.10ರಂದು ನಗರದ ಅರಮನೆ ಮೈದಾನದಲ್ಲಿ ಜೆಡಿಎಸ್ ಪಕ್ಷದ ಬೃಹತ್  ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಸಮಾವೇಶದ ಬಗ್ಗೆ ಚರ್ಚೆ ನಡೆಸಿದ ದೇವೇಗೌಡರು ಸೋತೆವು ಎಂದು ಸುಮ್ಮನಿದ್ದರೆ ಆಗುವುದಿಲ್ಲ, ಛಲದಿಂದ ಕೆಲಸ ಮಾಡಿದರೆ ಜನರು ಮೆಚ್ಚಿಕೊಳ್ಳುತ್ತಾರೆ.ಎಲ್ಲರೂ ಸೇರಿ ಪಕ್ಷವನ್ನು ಕಟ್ಟೋಣ ಎಂದು ಮುಖಂಡರನ್ನು ಹುರಿದುಂಬಿಸಿದರು ಎಂದು ಸಭೆಯ ನಂತರ ಸುದ್ದಿ ಗೋಷ್ಠಿಯಲ್ಲಿ ಸಿಎಂ ಇಬ್ರಾಹಿಂ, ಜಿಟಿ ದೇವೇಗೌಡರು ಹಾಗೂ ಬಂಡೆಪ್ಪ ಕಾಷೆಂಪೂರ ಮತ್ತು ಟಿ.ಎ.ಶರವಣ ತಿಳಿಸಿದರು.