ನವದೆಹಲಿ: ಒಳ್ಳೆಯ ದಿನ, ಒಳ್ಳೆಯ ಸಮಯ ನೋಡಿಕೊಂಡು ಯಾರಿಗೆ ಎಷ್ಟು ಕ್ಷೇತ್ರಗಳು ಎಂಬುದನ್ನು ದಸರಾ ನಂತರ ನಿರ್ಧಾರ ಮಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ – ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರ್ಪಡೆ ನಿಟ್ಟಿನಲ್ಲಿ ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ನಿರ್ಣಾಯಕ ಮಾತುಕತೆ ನಡೆಸಿದ ನಂತರ ಎಚ್ ಡಿ ಕೆ ಮಾಧ್ಯಮಗಳ ಜತೆ ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ಹೊಸ ರಾಜಕೀಯ ಶಖೆ ಆರಂಭಕ್ಕೆ ನಾಂದಿ ಹಾಡುವ ನಿಟ್ಟಿನಲ್ಲಿ, ಜೆಡಿಎಸ್ ಪಕ್ಷವು ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆ ಆಗುವ ಬಗ್ಗೆ ಕೇಂದ್ರ ಗೃಹ ಸಚಿವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಜತೆ ಮಹತ್ವದ ಮಾತುಕತೆ ಸೌಹಾರ್ದಯುತವಾಗಿ ನಡೆಯಿತು ಎಂದು ಹೇಳಿದರು.
ಮೈತ್ರಿ ಬಗ್ಗೆ ನಡೆದ ಮಾತುಕತೆ ನನಗೆ ಬಹಳ ಸಂತಸವಾಗಿದೆ. ಮುಂದೆ ಎಲ್ಲವೂ ಸುಗಮವಾಗಿ ನಡೆಯುತ್ತದೆ ಎಂದರು.
ರಾಜ್ಯದ 28 ಕ್ಷೇತ್ರಗಳಲ್ಲಿ ಅಷ್ಟನ್ನೂ ಗೆಲ್ಲುವ ಬಗ್ಗೆ ಚರ್ಚೆ ನಡೆಸಲಾಯಿತು. ಈ ವಿಷಯವನ್ನು ನಾನು ಬಿಜೆಪಿ ವರಿಷ್ಠರಿಗೆ ಒತ್ತಿ ಹೇಳಿದ್ದೇನೆ. ನನ್ನ ಮಾತಿಗೆ ಅವರೂ ಸಮಹಮತ ವ್ಯಕ್ತಪಡಿಸಿದರು ಎಂದು ತಿಳಿಸಿದರು.
ಬಿಜೆಪಿ ಸ್ಥಳೀಯ ನಾಯಕರನ್ನು ದೆಹಲಿ ಕರೆಸಿ ಮಾತುಕತೆ ನಡೆಸುವುದು, ನಂತರ ಎರಡೂ ಪಕ್ಷಗಳ ಹಿರಿಯರನ್ನು ಕರೆದು ಪರಸ್ಪರ ಸಮನ್ವಯತೆ ನಡೆಸುವ ಹಾಗೂ ದಸರಾ ಹಬ್ಬದ ನಂತರ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.
ಮಾಧ್ಯಮಗಳ ಮೈತ್ರಿ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಎಚ್ ಡಿ ಕೆ, ಬರೀ ಮೈತ್ರಿ ಬಗ್ಗೆ ಕೇಳಬೇಡಿ. ಕಾವೇರಿ ವಿಷಯದ ಬಗ್ಗೆಯೂ ಕೇಳಿ. ನಾನಿಲ್ಲಿ ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಮಾತುಕತೆ ನಡೆಸಲು ಬಂದಿದ್ದೇನೆ. ಕಾವೇರಿ, ಬರ ಸೇರಿದಂತೆ ರಾಜ್ಯದ ಮುಂದಿರುವ ಸಮಸ್ಯೆಗಳ ಬಗ್ಗೆಯೂ ಬಿಜೆಪಿ ವರಿಷ್ಠರ ಗಮನ ಸೆಳೆದಿದ್ದೇನೆ ಎಂದು ತಿಳಿಸಿದರು.
ಈ ಮೈತ್ರಿಯಿಂದ ಕಾವೇರಿ ನೀರು ಸೇರಿದಂತೆ ನಮ್ಮ ರಾಜ್ಯಕ್ಕೆ ಆಗಿರುವ ಸಮಸ್ಯೆಗಳಿಗೆ ಉತ್ತಮ ಪರಿಹಾರ ಸಿಗುತ್ತದೆ. ಈ ಅಂಶವನ್ನು ಇಟ್ಟುಕೊಂಡೇ ನಾನು ಅಮಿತ್ ಶಾ ಮತ್ತು ನಡ್ಡಾ ಅವರೊಂದಿಗೆ ಮುಕ್ತವಾಗಿ ಚರ್ಚಿಸಿದ್ದೇನೆ ಎಂದು ಉತ್ತರಿಸಿದರು.
ಮಾತುಕತೆ ಸಂದರ್ಭದಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಜೆಡಿಎಸ್ ರಾಜ್ಯ ಯುವಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಜರಿದ್ದರು.

