ಬೆಂಗಳೂರು: ಮನೆಮನೆಗೂ ಮದ್ಯಭಾಗ್ಯ ನೀಡುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ಕುಡುಕರ ತೋಟವನ್ನಾಗಿ ಮಾಡಲು ಹೊರಟಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಬಕಾರಿ ಆದಾಯವನ್ನು ಹೆಚ್ಚಿಸಿಕೊಳ್ಳಲು ಮೂರು ಸಾವಿರ ಜನಸಂಖ್ಯೆಯುಳ್ಳ ಪ್ರತೀ ಹಳ್ಳಿಯಲ್ಲೂ ಬಾರ್, ಮದ್ಯದ ಅಂಗಡಿ ತೆರೆಯುವುದು, ಸೂಪರ್ ಮಾರ್ಕೆಟ್ ಗಳಲ್ಲೂ ಮದ್ಯ ಮರಾಟಕ್ಕೆ ಅವಕಾಶ ನೀಡುವ ಸರ್ಕಾರದ ನಡೆ ಬಗ್ಗೆ ಕಿಡಿಕಾರಿದ್ದಾರೆ.
ನಾರಿಯರಿಗೆ ‘ಶಕ್ತಿ’ ತುಂಬುತ್ತೇವೆ ಎಂದ ಸರಕಾರ, ಈಗ ಅವರ ಬಾಳಿಗೆ ಬೆಂಕಿ ಹಾಕುತ್ತಿದೆ. ‘ಗೃಹಲಕ್ಷ್ಮೀ’ ಎಂದ ಸರಕಾರ ಅವರ ಬಾಳಿಗೆ ಗ್ರಹಣವಾಗಿದೆ. ‘ಗೃಹಜ್ಯೋತಿ’ ಎಂದು ಹೇಳಿ ಅವರ ಬಾಳಜ್ಯೋತಿಯನ್ನೇ ನಂದಿಸುತ್ತಿದೆ,ಅನ್ನಭಾಗ್ಯ ಬದಲು ಮದ್ಯಭಾಗ್ಯ ಎನ್ನುತ್ತಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಎಚ್ ಡಿ ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ನಾಟಕ ರಾಜ್ಯವು ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಐಟಿ-ಬಿಟಿಗೆ ಪ್ರಸಿದ್ಧಿ. ಇನ್ನು ಮುಂದೆ ಇದು ಬದಲಾಗಬಹುದು! ಕಾರಣವಿಷ್ಟೇ; ಕಾಂಗ್ರೆಸ್ ಸರಕಾರ ‘ಕರ್ನಾಟಕವನ್ನು ಕುಡುಕರ ತೋಟ’ವನ್ನಾಗಿ ಮಾಡ ಹೊರಟಿದೆ.
ಚುನಾವಣೆಗೆ ಮುನ್ನ ‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುತ್ತಿದ್ದರು, ಗೆದ್ದ ನಂತರ ‘ಕರ್ನಾಟಕ ಕುಡುಕರ ತೋಟ’ ಎನ್ನುತ್ತಿದ್ದಾರೆ.
ಇದು ರಾಜ್ಯ ಕಾಂಗ್ರೆಸ್ ಸರಕಾರದ ಸಂಕಲ್ಪವಾಗಿದೆ ಎಂದು ಟೀಕಿಸಿದ್ದಾರೆ.
ಯೋಜನೆಗಳ ಹೆಸರಲ್ಲಿ ಕೊಳ್ಳೆ ಹೊಡೆಯುವ ಹುನ್ನಾರ ಕಾಂಗ್ರೆಸ್ ಸರಕಾರದ್ದು. ಒಂದೆಡೆ ಮನೆಮನೆಗೂ ಗೃಹಜ್ಯೋತಿ ಎಂದ್ಹೇಳಿ, ಈಗ ಮನೆಮನೆಗೂ ‘ಮದ್ಯಭಾಗ್ಯ’ ನೀಡಲು ಹೊರಟಿದೆ. ಸರಕಾರವು ಧನಪಿಶಾಚಿ ಅವತಾರವೆತ್ತಿ ಅಬಕಾರಿ ಆದಾಯ ಹೆಚ್ಚಿಸಿಕೊಳ್ಳಲು ಈಗ ಮದ್ಯ ಸಮಾರಾಧನೆಗೆ ಶ್ರೀಕಾರ ಹಾಡಿದೆ. ಇದು 6ನೇ ಗ್ಯಾರಂಟಿ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

