ಹೈದರಾಬಾದ್- ಬೆಂಗಳೂರು ಸೇರಿ 9 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ರಾಜ್ಯಗಳ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ 9 ವಂದೇ ಭಾರತ್ ರೈಲುಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದರು.

ವೀಡಿಯೊ ಕಾನ್ಫರೆನ್ಸ್ ಮೂಲಕ ರೈಲುಗಳಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದರು.

ನಂತರ ಮಾತನಾಡಿದ ಅವರು,9 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಾಗಿದ್ದು, ಈ ರೈಲುಗಳು ರಾಜ್ಯಗಳ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಮತ್ತು ಭಾರತದಾದ್ಯಂತ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

25 ವಂದೇ ಭಾರತ್ ರೈಲುಗಳು ಈಗಾಗಲೇ ಸಂಚರಿಸುತ್ತಿವೆ, ಈಗ ಅವುಗಳೊಂದಿಗೆ ಇನ್ನೂ ಒಂಬತ್ತು ರೈಲುಗಳನ್ನು ಸೇರಿಸಲಾಗಿದೆ. ವಂದೇ ಭಾರತ್ ರೈಲುಗಳ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದೆ. 1,11,00,000 ಕ್ಕೂ ಹೆಚ್ಚು ಪ್ರಯಾಣಿಕರು ಈಗಾಗಲೇ ಈ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಇದರ ವೇಗ ಮೂಲಸೌಕರ್ಯ ಅಭಿವೃದ್ಧಿಯು 140 ಕೋಟಿ ಭಾರತೀಯರ ತಲುಪಿತ್ತಿದೆ. ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್‌ ರಾಜ್ಯಗಳ ಜನರು ವಂದೇ ಭಾರತ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಈ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ದೇಶದ ಹೊಸ ಶಕ್ತಿಯನ್ನು ಬಿಂಬಿಸುತ್ತವೆ ಎಂದು ಹೇಳಿದರು.

ಈ ರೈಲುಗಳು ಉದಯಪುರ-ಜೈಪುರ, ತಿರುನೆಲ್ವೆಲಿ-ಮಧುರೈ-ಚೆನ್ನೈ, ಹೈದರಾಬಾದ್-ಬೆಂಗಳೂರು, ವಿಜಯವಾಡ-ಚೆನ್ನೈ (ರೇಣಿಗುಂಟ ಮೂಲಕ), ಪಾಟ್ನಾ – ಹೌರಾ, ಕಾಸರಗೋಡು-ತಿರುವನಂತಪುರ, ರೂರ್ಕೆಲಾ-ಭುವನೇಶ್ವರ-ಪುರಿ, ರಾಂಚಿ-ಹೌರಾ ಹಾಗೂ ಜಾಮ್ನಗರ್-ಅಹ್ಮದಾಬಾದ್ ನಡುವೆ ಸಂಚರಿಸಲಿದೆ.