ಕಾವೇರಿ ನೆಪದಲ್ಲಿ ಬಿಜೆಪಿ – ಜೆಡಿಎಸ್ ರಾಜಕೀಯ ಮಾಡುತ್ತಿವೆ:ಸಿದ್ದರಾಮಯ್ಯ ಗಂಭೀರ ಆರೋಪ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನವರು ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ‌ ಮಾಡಿದರು

ಸೋಮವಾರ ವಿಧಾನಸೌಧದಲ್ಲಿ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿದರು.

ತಮ್ಮ ರಾಜೀನಾಮೆ ಕೇಳುತ್ತಿರುವ ವಿರೋಧ ಪಕ್ಷಗಳು, ಸರ್ವ ಪಕ್ಷ ಸಭೆಯಲ್ಲಿ ಹಾಗೆ ಹೇಳಲಿಲ್ಲವಲ್ಲ ಎಂದು ಮರು ಪ್ರಶ್ನಿಸಿದರು.

ಕಾವೇರಿ ನೀರಿನ ಸಂಬಂಧ ಮಂಗಳವಾರ ಬೆಂಗಳೂರು ಬಂದ್ ಹಾಗೂ 29 ರಂದು ಕರ್ನಾಟಕ ಬಂದ್ ಕರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಗೆ ಅವಕಾಶವಿದೆ. ಅದನ್ನು ನಾವು ಹತ್ತಿಕ್ಕಲು ಹೋಗುವುದಿಲ್ಲ ಎಂದು ತಿಳಿಸಿದರು.

ಕಾವೇರಿ ನೀರು ಹರಿಸುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಆದೇಶ ಇದೆ. ನೀರು ಹರಿಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಲಾಗಿದೆ.

ನಮ್ಮ ಅರ್ಜಿ ವಜಾ ಆಗಿದೆ, ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ನಿರ್ವಹಣಾ ಪ್ರಾಧಿಕಾರ ಎರಡರ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದೆವು. ಸುಪ್ರೀಂಕೋರ್ಟ್ ನಮ್ಮ ಹಾಗೂ ತಮಿಳುನಾಡಿನ ಅರ್ಜಿಯನ್ನು ತಿರಸ್ಕಾರ ಮಾಡಿದೆ ಎಂದು ತಿಳಿಸಿದರು.

ತಮಿಳುನಾಡು ಸರ್ಕಾರ 24,000 ಕ್ಯೂಸೆಕ್ ನೀರು ಕೇಳಿತ್ತು, ನಂತರ 7200 ಕ್ಯೂಸೆಕ್ ಕೇಳಿದರು. ನಾವು 5000 ಕ್ಯೂಸೆಕ್ ನೀರು ಕೂಡ ಕೊಡಲಾಗುವುದಿಲ್ಲ. ನಮ್ಮ ಬಳಿ ನೀರಿಲ್ಲ ಎಂದು ವಾದಿಸಿದ್ದು, ಅದನ್ನು ಕೂಡಾ ನ್ಯಾಯಾಲಯ ಒಪ್ಪಿಲ್ಲ ಎಂದು ಸಿಎಂ ಹೇಳಿದರು

ಪುನಃ ಸೆಪ್ಟೆಂಬರ್ 26 ರಂದು ಸರ್ವೋಚ್ಚ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದ್ದು. ನಮ್ಮ ವಾದವನ್ನು ಇನ್ನಷ್ಟು ಬಲವಾಗಿ ಮಂಡಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.