ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರೆ ನೀಡಿದ್ದ‌ ಬೆಂಗಳೂರು ಬಂದ್ ಸಂಪೂರ್ಣ ಯಶಸ್ವಿ

ಬೆಂಗಳೂರು: ಸಂಕಷ್ಟದ ಸಂದರ್ಭದಲ್ಲೂ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವುದನ್ನು ಖಂಡಿಸಿ ಮಂಗಳವಾರ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಬಹುತೇಕ ಅಂಗಡಿ ಮುಗ್ಗಟ್ಟುಗಳು ನಗರದಲ್ಲಿ ಮುಚ್ಚಿದ್ದವು.ಅಂಗಡಿಗಳ ಶೆಡ್ ಮುಂದೆ ವ್ಯಕಿ ಹಾಗೂ ನಾಯಿ ಹಾಯಾಗಿ ಮಲಗಿದ್ದುದು ಕಂಡು ಬಂದಿತು.

ಬಿ ಎಂ ಟಿ ಸಿ, ಕೆ ಎಸ್ ಆರ್ ಟಿ ಸಿ ಮತ್ತು ಖಾಸಗಿ ಬಸ್ ಗಳು ಆಟೊ,ಕ್ಯಾಬ್ ಗಳು ಕೇವಲ ಬೆರಳೆಣಿಕೆಯಷ್ಟು ಸಂಚರಿಸಿದವು.

ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು ಬಹಳಷ್ಟು ರಸ್ತೆಗಳು ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.

ಖಾಸಗಿ ಬಸ್ ನಿಲ್ದಾಣದಲ್ಲಿ ಸಾಲು ಸಾಲಾಗಿ ಬಸ್ ಗಳು ನಿಂತಿದ್ದು ಕಂಡುಬಂದಿತ್ತು.

ಪೊಲೀಸರು ನಾಗರಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದ್ದರಿಂದ ಗುಂಪು ಗುಂಪಾಗಿ ಎಲ್ಲೂ ಜನರು ಓಡಾಡುತ್ತಿರಲಿಲ್ಲ. ಬಂಧ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿತ್ತು.

ಸುಮಾರು 150 ಸಂಘಟನೆಗಳು ಬಂಧ್ ಗೆ ಬೆಂಬಲಿಸಿದ್ದವು. ಕೆಲವರು ಮೈಸೂರು ಬ್ಯಾಂಕ್ ವೃತ್ತದ ರಸ್ತೆ ಮಧ್ಯಭಾಗದಲ್ಲಿ ಸೇರಿದ್ದರು ಆಗ ಪೊಲೀಸರು ಅವರುಗಳನ್ನು ಫ್ರೀಡಂ ಪಾರ್ಕ್ ಗೆ ಕಳುಹಿಸಿದರು.

ಟೌನ್ ಹಾಲ್ ಮತ್ತಿತರೆಡೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಕೂಡ ನಡೆಸಿದರು. ಪೊಲೀಸರು ಅವರುಗಳನ್ನು ಚದುರಿಸಿದರು. ಕೆಲವರನ್ನು ವಶಕ್ಕೆ ಪಡೆದರು.

ಸದಾ ಜನರಿಂದ ಗಿಜಿ ಗುಡುತ್ತಿದ್ದ ಕೆಆರ್ ಮಾರುಕಟ್ಟೆಯಲ್ಲಿ ಇಂದು ಕೆಲವೇ ಗ್ರಾಹಕರಿದ್ದರು. ಹೂವು, ಹಣ್ಣು, ತರಕಾರಿ ವ್ಯಾಪಾರ ಮಾಡುವವರು ಬಿಸಿಲಿನಲ್ಲಿ ಯಾವುದೇ ವ್ಯಾಪಾರವಿಲ್ಲದೆ ಪರಿತಪಿಸಿದರು.