ಚಾಮರಾಜನಗರ: ಕಾವೇರಿ ನೀರು ನಿಯಂತ್ರಣ ಸಮಿತಿಯು 3000 ಕ್ಯೂಸೆಕ್ ನೀರನ್ನು ಹರಿಸಲು ಆದೇಶಿಸಿದ್ದು,ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾನೂನು ತಂಡ ಸಲಹೆ ನೀಡಿದೆ ಅದರಂತೆ ನಡೆಯುತ್ತೇವೆ ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ,
ನೀರು ಬಿಡಲು ನಮ್ಮ ಬಳಿ ನೀರೇ ಇಲ್ಲ ಎಂದು ತಿಳಿಸಿದರು.
ಮಳೆ ಕೈಕೊಟ್ಟು 195 ತಾಲ್ಲೂಕು ಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಮಹದೇಶ್ವರನಲ್ಲಿ ಮಳೆಗಾಗಿ, ರಾಜ್ಯದ ಜನರಿಗೆ, ರೈತರಿಗೆ ಸೌಖ್ಯವಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.
ಮೂಢನಂಬಿಕೆ, ಮೌಢ್ಯ, ಕಂದಾಚಾರದಲ್ಲಿ ನಂಬಿಕೆ ಇಲ್ಲ. ಅದಕ್ಕಾಗಿಯೇ ಹಿಂದೆ ಮುಖ್ಯಮಂತ್ರಿ ಯಾದ ಕೂಡಲೇ ಚಾಮರಾಜನಗರಕ್ಕೆ ಭೇಟಿ ನೀಡಿದೆ. ಸುಮಾರು 12 ಬಾರಿ ಭೇಟಿ ನೀಡಿದ್ದು, 5 ವರ್ಷ ಗಟ್ಟಿಯಾಗಿ ಇದ್ದೆ. ಚಾಮರಾಜನಗರ ಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯ ಈಗ ಹೋಗಿದೆ ಎಂದು ಹೇಳಿದರು.
ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಗೆ ಕರೆನೀಡಿರುವ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ.
ಆದರೆ ಇತರರಿಗೆ ತೊಂದರೆಯಾಗಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ನಾವು ಈ ಆದೇಶ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

