ಕಾವೇರಿ ನೀರಿನ ವಿಚಾರ:ಕರ್ನಾಟಕ ಪರ ಧ್ವನಿ ಎತ್ತಿದ ಸುತ್ತೂರು ಶ್ರೀ

ಮೈಸೂರು: ಕಾವೇರಿ ನೀರಿನ ವಿಚಾರದಲ್ಲಿ ಸುತ್ತೂರು ಶ್ರೀಗಳು ಪತ್ರ ಬರೆದು ಕರ್ನಾಟಕ ಪರ ತಮ್ಮ ಧ್ವನಿ ಎತ್ತಿದ್ದಾರೆ.

ಕಾವೇರಿ ನೀರಿನ ಸಮಸ್ಯೆ ಮತ್ತೊಮ್ಮೆ ಉಲ್ಬಣಿಸಿದೆ. ಪ್ರತಿವರ್ಷವೂ ಈ ಸಮಸ್ಯೆ ಉಂಟಾಗುತ್ತಲೇ ಇದೆ. ಶತಮಾನಗಳಿಂದ ಇದೊಂದು ಜ್ವಲಂತ ಸಮಸ್ಯೆಯಾಗಿದೆ ಎಂದು ‌ತಿಳಿಸಿದ್ದಾರೆ.

ಪ್ರಾರಂಭದ ದಿನಗಳಿಂದಲೂ ತಮಿಳುನಾಡು ತನಗೆ ಅಗತ್ಯವಾದುದಕ್ಕಿಂತ ಹೆಚ್ಚಿನ ನೀರನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಲೇ ಇದೆ. ಕರ್ನಾಟಕದ ಕಾವೇರಿ ನದಿ ಪಾತ್ರದ ರೈತರು ಸಂಕಷ್ಟಕ್ಕೆ ಒಳಗಾಗುತ್ತಲೇ ಇದ್ದಾರೆ.

ಮೈಸೂರು- ಬೆಂಗಳೂರು ಇತರೆಡೆಗಳಿಗೆ ಕುಡಿಯುವ ನೀರಿಗೂ ಸಮಸ್ಯೆ ತಲೆದೋರುತ್ತಿದೆ. ಇದಕ್ಕೆ ಅಂತಿಮ ಪರಿಹಾರ ಯಾವಾಗ ಎಂಬುದು ಪ್ರಶ್ನಾರ್ಥಕವಾಗಿದೆ.

ಕರ್ನಾಟಕ ಸರ್ಕಾರವು ಎಲ್ಲ ಸಂದರ್ಭಗಳಲ್ಲಿಯೂ ನೆರೆರಾಜ್ಯದ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಲೇ ಬಂದಿದೆ.

ತನಗೆ ಎಷ್ಟೇ ತೊಂದರೆಗಳಾದರು ನ್ಯಾಯಾಧೀಕರಣ ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಜನಾಭಿಪ್ರಾಯದ ಕಡು ವಿರೋಧದ ನಡುವೆಯೂ ಗೌರವಿಸಿ ಪಾಲಿಸುತ್ತ ಬಂದಿದೆ.

ಇದನ್ನು ತಮಿಳುನಾಡಾಗಲಿ ಅಥವಾ ಸಂಬಂಧಪಟ್ಟವರು ಯಾರೇ ಆಗಲಿ ದೌರ್ಬಲ್ಯವೆಂದು ಭಾವಿಸಬಾರದು.

ಈ ಸಮಸ್ಯೆಗೆ ಅಂತಿಮ ಪರಿಹಾರದ ಅಗತ್ಯವಿದೆ. ಮಳೆಯನ್ನು ಆಧರಿಸಿ ನೀರಿನ ಸಂಗ್ರಹದ ಆಧಾರದ ಮೇಲೆ ನೀರು ಹಂಚಿಕೆಯ ಬಗೆಗೆ ಪ್ರತಿವರ್ಷವೂ ಕ್ರಮ ತೆಗೆದುಕೊಳ್ಳಬೇಕಾದುದು ಅಗತ್ಯ‌ ಎಂದು ‌ಸುತ್ತೂರು ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.

ಇದೀಗ ಉಲ್ಬಣಿಸಿರುವ ಸಮಸ್ಯೆಗೆ ಭಾರತ ಸರ್ಕಾರ, ಸರ್ವೋಚ್ಚ ನ್ಯಾಯಾಲಯ ಮತ್ತು ನ್ಯಾಯಾಧೀಕರಣಗಳು ಸಮಾಲೋಚಿಸಿ ಕರ್ನಾಟಕ-ತಮಿಳುನಾಡು ಹೊರತಾದ ಹೊರ ರಾಜ್ಯಗಳ ನೀರಾವರಿ ತಜ್ಞರ ಸಮಿತಿ ರಚಿಸಿ, ನೀರಿನ ಸಂಗ್ರಹಣೆಯ ವಾಸ್ತವಾಂಶವನ್ನು ಅಧ್ಯಯನ ಮಾಡಿ ಸಮಸ್ಯೆಗೆ ಪರಿಹಾರ ಸೂಚಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಶ್ರೀಗಳು ಸಲಹೆ ನೀಡಿದ್ದಾರೆ.

ಕರ್ನಾಟಕದ ಜನರ ಕುಡಿಯುವ ನೀರಿಗೆ, ರೈತರ ಬೆಳೆಗಳಿಗೆ ಹಾಗೂ ಜಾನುವಾರುಗಳಿಗೆ ಅಗತ್ಯವಾಗುವ ನೀರನ್ನು ಬಳಸಿಕೊಂಡು ನಂತರ ಹೆಚ್ಚಿನ ನೀರನ್ನು ತಮಿಳುನಾಡಿಗೂ ಅನುಕೂಲವಾಗುವಂತೆ ಹರಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರೆಲ್ಲರು ಮುಂದಾಗಬೇಕೆಂದು ಶ್ರೀಗಳು ಒತ್ತಾಯಿಸಿದ್ದಾರೆ.