ಡಿಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ.ದೇವೇಗೌಡರ ವಾಗ್ದಾಳಿ

ರಾಮನಗರ: ಜೆಡಿಎಸ್ ಪಕ್ಷವನ್ನು ಶೂನ್ಯ ಮಾಡಿ ಬಿಡುತ್ತೇನೆ, ಅಲ್ಲಿ ಒಬ್ಬ ಸಮರ್ಥ ನಾಯಕನನ್ನು ಇರಲು ಬಿಡಲ್ಲ ಎಂದು ಹೇಳಿದ್ದೀರಿ ಮಿಸ್ಟರ್ ಡಿ.ಕೆ.ಶಿವಕುಮಾರ್. ನಿಮ್ಮ ಕಸನು ಈಡೇರುವುದಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ರು ಗುಡುಗಿದ್ದಾರೆ.

ಡಿ.ಕೆ.ಶಿ ಅವರೇ, ನಿಮ್ಮ ಕೆಟ್ಟ ರಾಜಕೀಯ ಆಟ ನನ್ನ ಬಳಿ ನಡೆಯಲ್ಲ. ಅದು ನಿಮಗೆ ಗೊತ್ತಿರಲಿ, ನಮ್ಮ ಪಕ್ಷವನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಆಕ್ರೋಶ ಭರಿತರಾಗಿ ಎಚ್ಚರಿಸಿದರು

ಬಿಡದಿಯ ಕೇತಿಗಾನಹಳ್ಳಿಯ ಹೆಚ್.ಡಿ. ಕುಮಾರ ಸ್ವಾಮಿ ಅವರ ತೋಟದಲ್ಲಿ ಭಾನುವಾರ ಜೆಡಿಎಸ್ ಪಕ್ಷದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಮುಖಂಡರ ಸಭೆಯಲ್ಲಿ ದೇವೇಗೌಡರು ಮಾತನಾಡಿದರು.

ನಮ್ಮ ಪಕ್ಷವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ಯಾರಾದರೂ ಹಾಗೆ ಭಾವಿಸಿದ್ದರೆ ಅದು ಅವರ ಭ್ರಮೆ ಅಷ್ಟೇ ಎಂದು ಹೇಳಿದರು.

ಈ ಸಭೆ ಬಹಳ ಚೆನ್ನಾಗಿ ನಡೆದಿದೆ. ಕುಮಾರಸ್ವಾಮಿ ಅವರಿಗೆ ಇವತ್ತು ಒಳ್ಳೆಯ ಸಂದೇಶ ನೀಡಿದ್ದಾರೆ. ಪಕ್ಷದ ಶಕ್ತಿ ಏನು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಈ ಸಭೆಗೆ ಬಂದ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದು ಭಾವುಕರಾಗಿ ನುಡಿದರು .

ನಿಮ್ಮನ್ನೇ ನಂಬಿದ್ದೇನೆ,ಪಕ್ಷದ ಬೆಳೆವಣಿಗೆಗೆ ಒಳ್ಳೆಯ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ರಾಜಕೀಯ ಬೆಳವಣಿಗೆ ಆಗುತ್ತಿದೆ. ಈ ಬಗ್ಗೆ ಕೇಂದ್ರ ಗೃಹಮಂತ್ರಿ ಅವರನ್ನು ಭೇಟಿ ಮಾಡಿದ್ದೆ. ಸುದೀರ್ಘ ಚರ್ಚೆ ನಡೆಸಿದ್ದೇನೆ. ಅವರ ಜತೆ ಮೈತ್ರಿ ಬಗ್ಗೆ ಚರ್ಚೆ ಮಾಡಿದ್ದೆ ಎಂದು ಕಾರ್ಯಕರ್ತರಿಗೆ ಗೌಡರು ಹೇಳಿದರು.

ಈ ರಾಜಕಾರಣ ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆ. ಆದರೆ, ನಾನೆಂದೂ ಅದನ್ನು ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಿಲ್ಲ.

ಆದರೆ, ಕಾಂಗ್ರೆಸ್ ನವರು ರಾಜಕೀಯವನ್ನು ಅದೆಷ್ಟು ಕನಿಷ್ಠ ಮಟ್ಟಕ್ಕೆ ಇಳಿಸಬೇಕೋ ಅಷ್ಟು ಮಾಡಿದ್ದಾರೆ. ಸಿದ್ದಾಂತ ಎನ್ನುವುದು ಆ ಪಕ್ಷದಲ್ಲಿ ಇಂದಿರಾಗಾಂಧಿ ಅವರ ಕಾಲದಲ್ಲಿಯೇ ಮುಗಿದು ಹೋಯಿತು ಎಂದು ಟೀಕಾಪ್ರಹಾರ ನಡೆಸಿದರು.

ಈ ದೇಶ ಮುಂದೆ ಏನಾಗುತ್ತೋ ಊಹೆ ಮಾಡಲಾಗಲ್ಲ. ಪಕ್ಕದಲ್ಲಿ ಪಾಕಿಸ್ತಾನ, ಚೀನಾ ಇದೆ, ದೂರದಲ್ಲಿ ಅಮೆರಿಕ, ರಷ್ಯಾ ಇದೆ. ಈ ದೇಶವನ್ನು ಉಳಿಸುವ ನಾಯಕತ್ವ ಬೇಕು ಎಂದು ದೇವೇಗೌಡರು ಹೇಳಿದರು.

ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಎಷ್ಟು ಮಾಡಿದೆ, ನಾನು ಏನು ಮಾಡಿದೀನಿ ಎಂಬ ಬಗ್ಗೆ ಚರ್ಚೆ ನಡೆಯಲಿ. ಉತ್ತರ ಸಿಗುತ್ತದೆ ಎಂದು ಅವರು ಸವಾಲು ಹಾಕಿದರು.

ಪಕ್ಷವನ್ನು ಕಟ್ಟುತ್ತೇನೆ, ಈ ಜೀವ ಇರುವವರೆಗೂ ಪಕ್ಷಕ್ಕಾಗಿ ದುಡಿಯುತ್ತೇನೆ, ಎಲ್ಲ ಕಡೆ ಹೋರಾಟ ಮಾಡುತ್ತೇನೆ. ನನ್ನ ಆರೋಗ್ಯವನ್ನು ಲೆಕ್ಕ ಮಾಡುವುದಿಲ್ಲ ಎಂದು ತಿಳಿಸಿದರು.

ಕೊಟ್ಟಿರುವ ಗ್ಯಾರಂಟಿಗಳಿಂದ ಏನು ಆಗುತ್ತದೆ ಎನ್ನುವುದು ನನಗೆ ಗೊತ್ತಿದೆ. ಉತ್ತಮ ಬದುಕಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕುಮಾರಸ್ವಾಮಿ ಪ್ರಾಮಾಣಿಕವಾಗಿ ಕೆಲಸ ಮಾಡಿದರು. ನಾವು ನಿರಾಶೆ ಪಡಬೇಕಿಲ್ಲ. ಒಳ್ಳೆಯ ದಿನಗಳು ಬರುತ್ತವೆ ಎಂದು ಕಾರ್ಯಕರ್ತರು ‌ಮುಖಂಡರಲ್ಲಿ ಗೌಡರು ದೈರ್ಯ ತುಂಬಿದರು.