ಬೆಂಗಳೂರು: ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಧಕ್ಕೆ ತರುವುದು, ಕಲ್ಲು ತೂರುವುದು ಕಾನೂನು ಬಾಹಿರ ಇದನ್ನೆಲ್ಲ ಸಹಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
ಇಂಥ ಚಟುವಟಿಕೆಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಘಟನೆಗಳು ಎಲ್ಲೇ ನಡೆದರೂ ಅದನ್ನು ಹತ್ತಿಕ್ಕುತ್ತೇವೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಶಿವಮೊಗ್ಗ ಘಟನೆ ಬೇಸರ ತರಿಸಿದೆ ಎಂದು ಹೇಳಿದರು.
ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದಾರೆ. ಪೊಲೀಸರ ಮೇಲೂ ಕಲ್ಲು ಎಸೆದಿದ್ದು, ಅನಿವಾರ್ಯವಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಗಲಾಟೆಗೆ ಕಾರಣರಾದ 43 ದುಷ್ಕರ್ಮಿಗಳನ್ನು ಬಂದಿಸಿದ್ದು ಅವರ ಮೇಲೆ ಮೊಕದ್ದಮೆಗಳನ್ನು ಹೂಡಲಾಗುತ್ತಿದೆ. ಶಿವಮೊಗ್ಗ ಸಂಪೂರ್ಣ ನಿಯಂತ್ರಣದಲ್ಲಿದೆ.
ಪೊಲೀಸರು ಕ್ರಮ ಕೈಗೊಂಡಿದ್ದು ಶಿವಮೊಗ್ಗದಲ್ಲಿ ಶಾಂತಿ ನೆಲೆಸಿದೆ. ಶಾಂತಿ ಕಾಪಾಡಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.

