ಬೆಳಗಾವಿ: ನಮ್ಮ ಸರ್ಕಾರ ಕೋಮು ಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಭಂಗ ತರುವ ಪ್ರಕರಣಗಳನ್ನು ಸರ್ಕಾರ ನಿಯಂತ್ರಿಸಲಿದೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ಕೋಮು ಗಲಭೆ ಹೆಚ್ಚಾಗಿದೆ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಆರೋಪ ಮಾಡುವುದೇ ಕೆಲಸವಾಗಿದೆ,ಆರೋಪ ಮಾಡುವುದೆಲ್ಲ ಸತ್ಯವಲ್ಲ ಎಂದು ಹೇಳಿದರು.
ಶಿವಮೊಗ್ಗ ಪ್ರಕರಣದಲ್ಲಿ ಕಲ್ಲು ಹೊಡೆದ ದುಷ್ಕರ್ಮಿಗಳನ್ನು ಬಂಧಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೋಲಾರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಉತ್ತರಿಸಿ, ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು. ಆದರೆ ಆ ಪ್ರತಿಭಟನೆಗೆ ಸಕಾರಣವಿರಬೇಕು ಮತ್ತು ಶಾಂತಿಯುತವಾಗಿರಬೇಕು ಎಂದರು.
ಕುರುಬ ಸಮಾಜದ ಸಮಾವೇಶ ಸಂದರ್ಭದಲ್ಲಿ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಕೂಗು ಎದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಮ್ಮ ಸರ್ಕಾರದಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ಎಲ್ಲರನ್ನೂ ಒಳಗೊಂಡಂತಹ ಆಡಳಿತದ ನೀತಿ ನಮ್ಮ ಸರ್ಕಾರ ಹೊಂದಿದೆ ಎಂದು ಸಿಎಂ ಹೇಳಿದರು.

