ಬೆಂಗಳೂರು: ಮೂರ್ಖರಿಗೆ ಬುದ್ಧಿ ಮಂದ ಎನ್ನುವುದು ಗಾದೆ ಮಾತು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅದೇ ಆಗಿದೆ. ಅಧಿಕಾರದ ಮದದಿಂದ ಅದರ ಮಿದುಳಿಗೂ ಗೆದ್ದಲು ಹಿಡಿದಿದೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
4 ವರ್ಷದ ಹಿಂದೆ ಸರಕಾರ ಮಾಡಲು ಸಿದ್ದರಾಮಯ್ಯ, ಡಿಕೆಶಿ ಅವರ ಮನೆಗೆ ಕುಮಾರಸ್ವಾಮಿ ಅವರು ಬಂದಿದ್ದರಾ, ಸುಳ್ಳು ಹೇಳುವುದಕ್ಕೆ ಸಾಸಿವೆ ಕಾಳಿನಷ್ಟಾದರೂ ಸಂಕೋಚ ಬೇಡವೇ ಎಂದು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ.
135 ಸೀಟು ಗೆದ್ದಿದ್ದೇವೆ ಎನ್ನುವ ಧಿಮಾಕಿನಲ್ಲಿ ಏನು ಹೇಳಿದರೂ ಜನ ನಂಬುತ್ತಾರೆಂಬ ಅಹಂಕಾರವೇ?
ಕೈ ಅಭಯದ ಸಂಕೇತವೆಂದು ನಂಬಿದ್ದರು ಕುಮಾರಸ್ವಾಮಿ. ಆದರೆ, ಡಿ.ಕೆ.ಶಿವಕುಮಾರ್ ಅವರದ್ದು ಕೈ ಎತ್ತುವುದಷ್ಟೇ ಅಲ್ಲ, ಕೈ ಕೊಡುವುದರಲ್ಲೂ ಎತ್ತಿದ ಕೈ ಎಂಬುದು ಅವರಿಗೆ ಗೊತ್ತಾಗಲೇ ಇಲ್ಲ.
ಕುಮಾರಸ್ವಾಮಿ ಅವರ ಕಣ್ಣುಗಳಲ್ಲಿ ಕಣ್ಣೀರು ಬರುತ್ತದೆ, ನಿಜ. ಇಲ್ಲ ಎಂದವರು ಯಾರು ಇನ್ನೊಬ್ಬರ ಕಣ್ಣಲ್ಲಿ ರಕ್ತ ಸುರಿಸುವ ಕೆಲಸವನ್ನು ಅವರೆಂದೂ ಮಾಡಿಲ್ಲ, ಅವರ ನಾಲಿಗೆ ಸತ್ಯದ ಕಡೆಗೆ ಹೊರಳಿದೆಯೇ ಹೊರತು, ಅಸತ್ಯದೆಡೆಗಲ್ಲ.
ಅಣ್ಣಾ ಎಂದ ಆಚಾರವಿಲ್ಲದ ಆ ನಾಲಿಗೆ, ಇಂಥಾ ನೀಚ ಬುದ್ಧಿ ಬಿಡುವುದು ಯಾವಾಗ, ಪಿಹೆಚ್ ಡಿ ಮಾಡೋದಕ್ಕೆ ಅವರಿಂತ ಉತ್ತಮ ಗೈಡ್ ಬೇರೆ ಸಿಕ್ಕಾರೆಯೇ ನಿಮಗೆ ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.
ಮಾತೆತ್ತಿದರೆ ಜಾತಿಗಳನ್ನು ಎಳೆದು ತರುತ್ತೀರಿ. ಕನಕಪುರ ಸುತ್ತಮುತ್ತ ಅದೇ ಮಹಾನುಭಾವರಿಂದ ಒಕ್ಕಲೆದ್ದವರು ಎಷ್ಟೋ ಜನ. ಅವರೆಲ್ಲ ಯಾವ ಜಾತಿಯವರು? ಅಧಿಕಾರಕ್ಕೊಂದು ಜಾತಿ, ಕೊಳ್ಳೆ ಹೊಡೆಯುವುದಕ್ಕೊಂದು ಜಾತಿಯೇ ಎಂದು ಜೆಎಇಎಸ್ ಡಿಕೆಶಿ ಬಗ್ಗೆ ಕಿಡಿಕಾರಿದೆ.
ಕೊಳಕುಮಂಡಲಕ್ಕೆ ಎರಡು ತಲೆ ಇರುವಂತೆ ಕಾಂಗ್ರೆಸ್ಸಿಗೂ ಎರಡು ತಲೆ,ಒಂದರ ನಾಲಿಗೆಯ ಮೇಲೆ ಜಾತ್ಯತೀತ, ಇನ್ನೊಂದರ ನಾಲಿಗೆ ಮೇಲೆ ಜಾತಿಗಣಿತ.
ಜನರು ಛೀ ಥೂ ಎನ್ನುತ್ತಿದ್ದಾರೆ. ಸ್ವತಃ ಕಾಂಗ್ರೆಸ್ಸೇ ಪ್ರಾದೇಶಿಕ ಪಕ್ಷಗಳ ಜೀತಕ್ಕೆ ಬಿದ್ದಿರುವಾಗ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಲು ನಾಚಿಕೆ ಆಗುವುದಿಲ್ಲವೇ ಎಂದು ಟೀಕಿಸಿದೆ.
ಪ್ರಾದೇಶಿಕ ಪಕ್ಷಗಳ ಪಟ್ಟುಗಳಿಗೆ ಸೂತ್ರವಿಲ್ಲದ ಪತಂಗದಂತೆ ಪತರಗುಟ್ಟುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಅಮಿತ್ ಶಾ ಅವರ ಹೆಸರು ದುಃಸ್ವಪ್ನದಂತೆ ಕಾಡುತ್ತಿದೆ.
ರಾಜಕೀಯ ಸ್ವಾರ್ಥಕ್ಕಾಗಿ ಭಯೋತ್ಪಾದಕರನ್ನೂ ಸಮರ್ಥಿಸುತ್ತಾ; ಈಗ ಭಯ, ಒತ್ತಡ, ಷರತ್ತು ಎಂದು ಪಠಿಸುತ್ತಿದೆ. ಕಾಲಾಯ ತಸ್ಮೈ ನಮಃ, ಇದನ್ನು ಕಾಂಗ್ರೆಸ್ ಮರೆಯದಿದ್ದರೆ ಕ್ಷೇಮ.
ದೇವೇಗೌಡರು, ಕುಮಾರಸ್ವಾಮಿ ಅವರಿಗೆ ದ್ರೋಹವೆಸಗಿದವರ ಪಟ್ಟಿಯನ್ನು ನೀವೆ ಮಾಡಿದ್ದೀರಿ, ಸಂತೋಷ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಪಮಾನಕರವಾಗಿ ದೆಹಲಿಗೆ ಅಟ್ಟಿದವರು ಯಾರು ಎಂದು ಪ್ರಶ್ನಿಸಿದೆ.
ಸಿದ್ದವನದಲ್ಲಿ ಸಿದ್ದಸೂತ್ರ ಹೆಣೆದು ಮೈತ್ರಿ ಸರಕಾರ ತೆಗೆದವರು ಯಾರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇ ಕಾಡಿ-ಬೇಡಿ ತಂದ ಸರಕಾರಕ್ಕೆ ಅಂತ್ಯ ಕಾಣಿಸಿದ ಆ ಹ್ಯೂಬ್ಲೆಟ್ ವೀರನ ಬಗ್ಗೆ ಗೊತ್ತಿಲ್ಲವೇ ಎಂದು ಸಿದ್ದರಾಮಯ್ಯ ಅವರಬಗ್ಗೆಯೂ ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ಲೋಕಸಭೆ ಚುನಾವಣೆ ಹೊತ್ತಿಗೆ ಮೈತ್ರಿಗೆ ಪಿಂಡ ಪ್ರದಾನ ಮಾಡಿ ಸ್ವಪಕ್ಷವನ್ನೇ ಬೀದಿಯಲ್ಲಿ ನಿಲ್ಲಿಸಿದ ಆ ಲೋಕೋತ್ತರ ಜಾತ್ಯತೀತವಾದಿಯ ಅಸಲಿಮುಖ ಗೋಚರವಾಗಿಲ್ಲವೇ ಎಂದು ಕೇಳಿದೆ ಜೆಡಿಎಸ್.

