ಮಹಿಳೆಯರು ಸ್ವಾವಲಂಬಿ ಬದುಕನ್ನು ನಡೆಸಬೇಕು:ಡಾ.ಹೆಚ್.ಸಿ ಮಹದೇವಪ್ಪ ಕರೆ

ಮೈಸೂರು: ಮಹಿಳೆಯರು ಯಾರ ಮೇಲೂ ಅವಲಂಬಿತರಾಗದೆ ಸರ್ಕಾರದ ಯೋಜನೆಗಳು ಹಾಗೂ ಕಡ್ಡಾಯ ಶಿಕ್ಷಣದ ಮೂಲಕ ಸ್ವಾವಲಂಬಿಯಾಗಿ ಬದುಕು ನಡೆಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಮೈಸೂರಿನ ಜೆಕೆ ಮೈದಾನದಲ್ಲಿ ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಮಹಿಳಾ ದಸರಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರು ದಸರಾ ಎಂದರೆ ನಾಲ್ವಡಿ ಕೃಷ್ಣರಾಜರನ್ನು ನೆನೆಯಬೇಕಾದ ಒಂದು ವಿನೂತನ ಕಾರ್ಯಕ್ರಮ. ಮಹಿಳೆಯರ ಶಿಕ್ಷಣಕ್ಕಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅನೇಕ ಕೆಲಸಗಳನ್ನು ಮಾಡಿದ್ದಾರೆ.

ಸಾವಿತ್ರಿ ಬಾಪುಲೆ ಮತ್ತು ಜ್ಯೋತಿ ಬಾಪುಲೆ ಮಹಿಳೆಯರ ವಿರುದ್ಧದ ದೌರ್ಜನ್ಯವನ್ನು ಖಂಡಿಸಿ ಮಹಿಳಾ ಶಿಕ್ಷಣಕ್ಕಾಗಿ ಶ್ರಮಿಸಿದರು. 17 ಶತಮಾನದಲ್ಲಿ ಬಸವಣ್ಣನವರು ಲಿಂಗ ತಾರತಮ್ಯದ ವಿರುದ್ಧ ಹೋರಾಡಿ ಸ್ವಂತ ಮನೆಯನ್ನು ಬಿಟ್ಟು ಹೊರ ನಡೆದರು. ಅದೇ ರೀತಿಯಾಗಿ ಮಹಿಳೆಯರ ಸಮಾನತೆಗಾಗಿ ತಮ್ಮ ಕಾನೂನು ಮಂತ್ರಿ ಪದವಿಯನ್ನೇ ತ್ಯಾಗ ಮಾಡಿದ ಡಾ.ಬಿ.ಆರ್ ಅಂಬೇಡ್ಕರ್ ಎಂದು ಸ್ಮರಿಸಿದರು.

ನಮ್ಮ ಸರ್ಕಾರ ಮಹಿಳೆಯರಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದು ಅದರಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮ ಬಳಸಿಕೊಂಡು ಸ್ವಾಭಾವಲಂಬಿ ಬದುಕು ನಡೆಸಬೇಕು ಎಂದು ಸಚಿವರು ಕರೆ ನೀಡಿದರು.

ಇದೇ ಸಮಯದಲ್ಲಿ ಮಹಿಳಾ ದಸರಾ ಪ್ರಯುಕ್ತ, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ವಸ್ತು ಪ್ರದರ್ಶನ ಮಾರಾಟ ಮೇಳ ಹಾಗೂ ಮಳಿಗೆಗಳನ್ನು ಉದ್ಘಾಟಿಸಿ ಮಹದೇವಪ್ಪ ಅವರು ಎಲ್ಲಾ ಮಳಿಗೆಗಳಿಗೂ ಭೇಟಿ ನೀಡಿ ಮಹಿಳೆಯರಿಗೆ ಶುಭ ಕೋರಿದರು.

ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಶಿವಕುಮಾರ್ ಅವರು ಮಾತನಾಡಿ ಮಹಿಳಾ ದಸರಾ ಕಾರ್ಯಕ್ರಮವು ಮಹಿಳೆಯರ ಅಭಿವೃದ್ಧಿ ಪೂರಕವಾಗಿದೆ. ಮಹಿಳೆಯರು ಆರ್ಥಿಕವಾಗಿ ಮುಂದೆ ಬಂದು ಸ್ವಭಾವಲಂಬಿಯಾಗಿ ಬದುಕಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಮೇಯರ್ ಡಾ. ರೂಪ, ನಗರ ಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ಅಧ್ಯಕ್ಷರಾದ ಸುಧಾ ಮಹದೇವಯ್ಯ, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ವಿಶೇಷಾಧಿಕಾರಿಗಳಾದ ರುಚಿ ಬಿಂದಾಲ್ ಮತ್ತಿತರರು ಉಪಸ್ಥಿತರಿದ್ದರು.