ಬೆಂಗಳೂರು: ಕುಣಿಯಲಾರದವರು ನೆಲ ಡೊಂಕು ಎಂದು ಹೇಳುವಂತೆ ತಮಗೆ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಬೇರೆಯವರ ಮೇಲೆ ಆರೋಪ ಹೊರಿಸುವುದು ನಿರರ್ಥಕ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ತಮ್ಮ ಹಿಂದಿನ ಸರ್ಕಾರವನ್ನು ಕೆಡವಲು ಸಿದ್ದರಾಮಯ್ಯ ಅವರೂ ಕಾರಣರು ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಸಿಎಂ ಈ ರೀತಿ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಅವರು ಸೋಮವಾರ ಕಿತ್ತೂರು ರಾಣಿ ಚೆನ್ನಮ್ಮನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾಳೆ ನಡೆಯಲಿರುವ ಚಾಮುಂಡೇಶ್ವರಿ ದೇವಿ ಮೆರವಣಿಗೆ, ನಂದಿಕಂಬದ ಪೂಜೆ, ಪಂಜಿನ ಮೆರವಣಿಗೆ ಸೇರಿದಂತೆ ದಸರಾ ಮಹೋತ್ಸವದಲ್ಲಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಭಾಗವಹಿಸಲಿದ್ದೇನೆ ಎಂದು ಹೇಳಿದರು.
ತಾವು ವಿಶ್ವಕಪ್ ಕ್ರಿಕೆಟ್ ವೀಕ್ಷಿಸಲು ತೆರಳಿದ್ದಕ್ಕೆ ಕುಮಾರಸ್ವಾಮಿಯವರು ಟೀಕಿಸಿದ್ದಾರಲ್ಲಾ ಎಂದು ಪ್ರಶ್ನೆಗೆ, ಪ್ರತಿಕ್ರಿಯಿಸಿ ಕ್ರಿಕೆಟ್ ಬೆಂಬಲಿಸಲು ತೆರಳಲಾಗಿತ್ತು. ಅವರು ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಇದ್ದ ಕಾರಣವನ್ನು ಮೊದಲು ತಿಳಿಸಲಿ ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳು ವಸತಿಗೃಹವನ್ನು ಹಿಂದಿರುಗಿಸಿಲ್ಲ ಎಂಬ ಎಚ್ ಡಿ ಕೆ ಟೀಕೆಗೆ ಉತ್ತರಿಸಿ, ಯಡಿಯೂರಪ್ಪನವರೂ ಕಾವೇರಿಯಲ್ಲಿ ಕಡೆಯತನಕ ವಾಸವಿದ್ದರು. ಜಾರ್ಜ್ ಅವರಿಗೆ ಹಂಚಿಕೆಯಾಗಿದ್ದ ವಸತಿಗೃಹದಲ್ಲಿ ನಾನು ವಾಸವಿದ್ದೆ. ನಾನು ವಾಸವಿದ್ದ ವಸತಿಗೃಹ ಮೀಸಲಾದ ವಸತಿಗೃಹವಲ್ಲ. ಅದರಲ್ಲಿ ಯಾರು ಬೇಕಾದರೂ ವಾಸವಿರಬಹುದು ಎಂದು ಸಿಎಂ ಟಾಂಗ್ ನೀಡಿದರು.

