ಬೆಂಗಳೂರು: ಕನಕಪುರ ಸುತ್ತಮುತ್ತ ಯಾರ ಆಸ್ತಿಗಳಿವೆ, ಅದರಲ್ಲಿ ಬೇನಾಮಿಗಳು ಎಷ್ಟು, ಎಲ್ಲೆಲ್ಲಿ ಅಕ್ರಮವಾಗಿ ಬೇಲಿ ಹಾಕಲಾಗಿದೆಯೊ ಅವುಗಳನ್ನು ಸಕ್ರಮ ಮಾಡಿಕೊಳ್ಳಲು ಬೆಂಗಳೂರು ಸೇರ್ಪಡೆಯ ನಾಟಕವೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಹೇಳಿರುವ ಮಾತಿಗೆ ಕುಮಾರಸ್ವಾಮಿ ಗರಂ ಆಗಿದ್ದು, ಕನಕಪುರ ತಾಲ್ಲೂಕು ರಾಮನಗರ ಕ್ಷೇತ್ರದಲ್ಲಿಯೇ ಉಳಿಯಬೇಕು ಎಂಬುದಾಗಿ ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಾಮನಗರ ಜಿಲ್ಲೆಯಿಂದ ಕನಕಪುರ ತಾಲೂಕನ್ನು ಬೇರ್ಪಡಿಸಿ ಬೆಂಗಳೂರಿಗೆ ಸೇರಿಸುವೆ ಎಂದು ನೀಡಿರುವ ಹೇಳಿಕೆ ಸರಿಯಲ್ಲ.
ಕನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು ತಮ್ಮ ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಅವರು ಕನಕಪುರ ಜನರ ನೆಪ ಹೇಳಿಕೊಂಡು ಈ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ ಎನ್ನುವ ಅವರ ಮಾತು ರಾಮನಗರ ಜಿಲ್ಲೆಗೆ ಎಸಗುವ ಮಹಾದ್ರೋಹ ಎಂದು ಹೇಳಿದ್ದಾರೆ
ದಿನ ಬೆಳಗಾದರೆ ಕನಕಪುರದವರು ಬೆಂಗಳೂರಿಗೆ ಅಲೆಯಬೇಕೆ, ಉಪ ಮುಖ್ಯಮಂತ್ರಿಗಳ ಒಳ ಉದ್ದೇಶದ ಬಗ್ಗೆ ಅನೇಕ ಅನುಮಾನಗಳು ಮೂಡುತ್ತವೆ ಎಂದಿದ್ದಾರೆ.
ಕನಕಪುರ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರ ಪಾಲಾದ ಮೇಲೆ ಮೈತ್ರಿ ಸರಕಾರದ ಅವಧಿಯಲ್ಲಿ ಕನಕಪುರಕ್ಕೆ ಮತ್ತೊಂದು ಮೆಡಿಕಲ್ ಕಾಲೇಜ್ ಮಂಜೂರು ಮಾಡಿದ್ದೆ. ಆದರೆ, ಇದೇ ಮಹಾನುಭಾವರು ಮೈತ್ರಿ ಸರಕಾರವನ್ನು ತೆಗೆದ ಪರಿಣಾಮ ಆ ಯೋಜನೆ ನೆನೆಗುದಿಗೆ ಬಿತ್ತು.
ಯೋಜನೆಯೂ, ಅದರ 350 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವೂ ಅಲ್ಲಿಯೇ ಉಳಿಯಿತು. ಉಪ ಮುಖ್ಯಮಂತ್ರಿ ಆದವರು ಆ ಯೋಜನೆಯನ್ನು ಪೂರ್ಣಗೊಳಿಸಬೇಕೆ ಅಥವಾ ರಾಮನಗರ ಮೆಡಿಕಲ್ ಕಾಲೇಜ್ ಅನ್ನು ಹೈಜಾಕ್ ಮಾಡಲು ಹುನ್ನಾರ ನಡೆಸಬೇಕೇ ಎಂದು ಕುಮಾರಸ್ವಾಮಿ ಕಾರವಾಗಿ ಪ್ರಶ್ನಿಸಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳ ಜನರ ಬಹುಕಾಲದ ಕನಸು. ಆ ಕನಸನ್ನು ನಾನು ನನಸು ಮಾಡಿದ್ದೇನೆ. ಈಗ ತಮ್ಮ ಸ್ವಾರ್ಥಕ್ಕಾಗಿ ರಾಮನಗರ ಜಿಲ್ಲೆ ಜನರ ಬೆನ್ನಿಗೆ ಚೂರಿ ಹಾಕಿ ಕನಕಪುರದ ಜನರ ಹಿತಕ್ಕೆ ಕೊಡಲಿಪೆಟ್ಟು ಹಾಕುವ ಹುನ್ನಾರ ನಡೆದಿದೆ.
ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕನಕಪುರ ಸೇರಿ 4 ವಿಧಾನಸಭೆ ಕ್ಷೇತ್ರಗಳ ಜನರೂ ಒಟ್ಟಾಗಿ ಒಂದೇ ಜಿಲ್ಲೆಯಲ್ಲಿ ಉಳಿಯಲಿದ್ದಾರೆ. ಡಿ.ಕೆ.ಶಿವಕುಮಾರ್ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ ಡಿ ಕೆ ಹೇಳಿದ್ದಾರೆ.

