ಸಿದ್ದರಾಮಯ್ಯಗೆ ನಾನೇ ವಿಲನ್ ನಿಜ: ವಿಲನ್ ಆಗದೇ ಫ್ರೆಂಡ್ ಆಗಲು ಸಾಧ್ಯವೇ ಹೆಚ್.ಡಿ.ಕೆ ತಿರುಗೇಟು

ಬೆಂಗಳೂರು: ನಾನು ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ವಿಲನ್ ಹೌದು, ಇಲ್ಲ ಎಂದವರ್ಯಾರು ಅವರಿಗೆ ನಾನು ವಿಲನ್ ಆಗದೇ ಸ್ನೇಹಿತ ಆಗಲು ಸಾಧ್ಯವಿಲ್ಲ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಗುರುವಾರ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ತಾಜ್ ನಲ್ಲಿ ಇದ್ದೆ ಅಂತ ಪದೇ ಪದೇ ಹೇಳ್ತಾರೆ. ತಾಜ್ ನಲ್ಲಿ ನಾನು ಮೋಜು ಮಸ್ತಿ ಮಾಡ್ತಿರಲಿಲ್ಲ. ಅಭಿವೃದ್ಧಿ ಕೆಲಸದ ಚರ್ಚೆ ಮಾಡ್ತಿದ್ದೆ. ನನ್ನ ಬಳಿ ಎಲ್ಲಾ ದಾಖಲಾತಿ ಇದೆ ಎಂದು ಹೇಳಿದರು.

ನನ್ನನ್ನು ಕಾಂಗ್ರೆಸ್ ನಾಯಕರು ಸಿಎಂ ಎನ್ನುವ ಗೌರವ ಇಲ್ಲದೆ ಪಪೆಟ್ ರೀತಿ ನಡೆಸಿಕೊಂಡು ಅಪಮಾನ ಮಾಡಿದರು.

ನಾನು ಸಿಎಂ ಆದಾಗ ಕಾಂಗ್ರೆಸ್ ಶಾಸಕರು ಇಸ್ಪೀಟ್ ಎಲೆ ಎಸೆದ ಹಾಗೆ ಅವರ ಅಹವಾಲುಗಳನ್ನು ನನ್ನ ಟೇಬಲ್ ಮೇಲೆ ಎಸೆಯುತ್ತಿದ್ದರು. ಅಂತಹವರು ನನ್ನ ಬಗ್ಗೆ ವಿಲನ್ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ನನ್ನ ನೇತೃತ್ವದ ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಅವರೇ. ಇದರಲ್ಲಿ ಎರಡು ಮಾತಿಲ್ಲ ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದರು.

ಬಿಜೆಪಿ‌ಯವರು ಸರ್ಕಾರ ಬೀಳಿಸಿದ್ದರು ಅಂತ ಹೇಳಿದ್ದೆ. ಆದರೆ ಅದಕ್ಕೆ ಬಿತ್ತನೆ ಹಾಕಿದ್ದು ಇದೇ ಸಿದ್ದರಾಮಯ್ಯ.

ರಮೇಶ್ ಜಾರಕಿಹೋಳಿ ಯಾರು, ಅವರಿಗೂ ನನಗೂ ಯಾವ ಶತ್ರುತ್ವ ಇತ್ತಾ, ಬೆಳಗಾವಿ ರಾಜಕೀಯ ಸರಿ ಮಾಡಿ ಎಂದು ನಾನು ಇವರಿಗೆ ಹೇಳಿದೆ. ಇವರು ಸರಕಾರ ಬಿದ್ದು ಹೋಗಲಿ ಎಂದು ಸುಮ್ಮನಿದ್ದರು.

ಆಗ ಬಿಜೆಪಿ‌ ಜತೆ ಕೈ ಜೋಡಿಸಿದ್ದು ಸಿದ್ದರಾಮಯ್ಯ. ಅದಕ್ಕೆ ‌ಸಮ್ಮಿಶ್ರ ಸರಕಾರ ಬಿದ್ದು ಹೋಯಿತು ಎಂದು ಎಚ್ ಡಿ ಕೆ ನೇರ ಆರೋಪ ಮಾಡಿದರು.

ಇಬ್ಬರು ಪಕ್ಷೇತರ ಶಾಸಕರನ್ನು ಮಂತ್ರಿ ಮಾಡಿಸಿದ್ದು ಸಿದ್ದರಾಮಯ್ಯ. ಬಿ.ಸಿ.ಪಾಟೀಲ್ ಅವರನ್ನು ಮಂತ್ರಿ ಮಾಡಲು ಹೇಳಿದ್ದೆ. ಆದರೆ‌ ಸಿದ್ದರಾಮಯ್ಯ ಮಾಡಲಿಲ್ಲ. ನನ್ನ ಮಾತನ್ನು ಕಿವಿಗೇ ಹಾಕಿಕೊಳ್ಳಲಿಲ್ಲ.

ಶ್ರೀಮಂತ ಪಾಟೀಲ್, ಆರ್.ಶಂಕರ್ ಅವರನ್ನು ರೆಸಾರ್ಟ್ ನಿಂದ ಕಳಿಸಿದ್ದು ಇದೇ ಸಿದ್ದರಾಮಯ್ಯ ಎಂದು ಟೀಕಾ ಪ್ರಹಾರ ನಡೆಸಿದರು.

ಅಪ್ಪ ನಿಮಗೊಂದು ನಮಸ್ಕಾರ,14 ತಿಂಗಳು ನನ್ನನ್ನ ಅಧಿಕಾರದಲ್ಲಿ ಇಟ್ಟಿದ್ದಕ್ಕೆ ನಮೋ ನಮಃ. ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಎಂದು ಕೈಮುಗಿದರು.

ಗೃಹಲಕ್ಷ್ಮಿ ರಾಜಸ್ಥಾನದಲ್ಲಿ ಯಾಕೆ 10 ಸಾವಿರ‌ ಕೊಡ್ತಿದ್ದೀರಾ, ಕಾಂಗ್ರೆಸ್ ಎಲ್ಲಾ ಕಡೆ ಗ್ಯಾರಂಟಿಗಳನ್ನು ಕೊಡುತ್ತಿದೆ ಈ ಕಾರಣಕ್ಕೆ ಎಲ್ಲ ಯೋಜನೆಗಳು ಹಳ್ಳ ಹಿಡಿದಿವೆ.

ಗ್ಯಾರಂಟಿಗಳ ಬಗ್ಗೆ ಜನ ಛೀ ಥೂ ಎಂದು ಉಗಿಯೋ ಕಾಲ ಬರುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.