ಬೆಳಗಾವಿ: ಹುಲಿ ಉಗುರಿನ ಪ್ರಕರಣ ಇದೀಗ ರಾಜಕಾರಣಿಗಳಿಗೂ ಸಂಕಷ್ಟ ತಂದಿದ್ದು ಬೆಳಗಾವಿಯ ಪ್ರಭಾವಿ ಸಚಿವರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪದ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸದ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳಗಾವಿಯ ಕುವೆಂಪು ನಗರದಲ್ಲಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಿವಾಸದ ಮೇಲೆ ಡಿಎಫ್ಒ ಶಂಕರ್ ಕಳ್ಳೋಲ್ಕರ್ ನೇತೃತ್ವದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹುಲಿ ಉಗುರು ಧರಿಸಿದ್ದ ಆರೋಪ ಕೇಳಿ ಬಂದಿದ್ದರಿಂದ ಅವರ ಮನೆಯಲ್ಲೂ ತಪಾಸಣೆ ನಡೆಸಲಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನನ್ನ ಮಗ ಧರಿಸಿದ್ದು ಪ್ಲಾಸ್ಟಿಕ್ ಪೆಂಡೆಂಟ್, ಮದುವೆಯಲ್ಲಿ ಅದನ್ನು ಯಾರೋ ಉಡುಗೊರೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ಮನೆಗೆ ಬಂದಿದ್ದು ತಪಾಸಣೆ ಮಾಡಿದ್ದಾರೆ. ಒರಿಜಿನಲ್ ಇದ್ದರೇ ಅದನ್ನ ಅಧಿಕಾರಿಗಳು ಪರಿಶೀಲನೆ ಮಾಡ್ತಾರೆ. ನನಗೂ ಒಂದೇ ಕಾನೂನು, ಸಾಮಾನ್ಯರಿಗೂ ಒಂದೇ ಕಾನೂನು ಎಂದು ತಿಳಿಸಿದ್ದಾರೆ.

