ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್

ಮೈಸೂರು: ಪ್ರತಿ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ತಿಳಿಸಿದರು.

ಶುಕ್ರವಾರ ಮೈಸೂರು ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಸ್ತುಪ್ರದರ್ಷನ ಉದ್ಘಾಟನಾ ಕಾರ್ಯಕ್ರಮ ವೀಕ್ಷಿಸಿ ನಂತರ ಸುದ್ದುಗೋಷ್ಠಿಯಲ್ಲಿ ಮಾತನಾಡಿದರು.

ಈಗಾಗಲೇ ರಾಜ್ಯದಲ್ಲಿ 23 ಮೆಡಿಕಲ್ ಕಾಲೇಜುಗಳಿದ್ದು ,ಉಳಿದ ಜಿಲ್ಲೆಗಳಲ್ಲಿಯೂ ಹಣಕಾಸಿನ ಲಭ್ಯತೆ ನೋಡಿಕೊಂಡು ಹೊಸ ಮೆಡಿಕಲ್ ಕಾಲೇಜು ತೆರೆಯಲಾಗುವುದು‌ ಎಂದು ಹೇಳಿದರು.

ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಟ್ರಾಮಾ ಕೇರ್ ಸೆಂಟರ್ ಆರಂಭವಾಗಿದೆ ಹಾಗೂ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿಗಳು ಆರಂಭವಾಗಿವೆ ಎಂದು ತಿಳಿಸಿದರು.

ಕೆ.ಆರ್ ಆಸ್ಪತ್ರೆಯ ಸಂಪೂರ್ಣ ನವೀಕರಣ ಕಾರ್ಯ ಮುಗಿಸಲು ಜನವರಿಯವರಗೆ ಗಡುವು ನೀಡಲಾಗಿದೆ ನಂತರ ಮೂರು ತಿಂಗಳೊಳಗಾಗಿ ಸಂಪೂರ್ಣ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಹಾಗು ಅಗತ್ಯ ಉಪಕರಣಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ಮೆಡಿಕಲ್ ಸೀಟುಗಳ ಹೆಚ್ಚಳದ ಬಗೆಗೆ ಪ್ರತಿಕ್ರಿಯಿಸಿದ ಸಚಿವರು ಪ್ರಸ್ತುತ ,150 ಸೀಟುಗಳು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಆ ಸಂಖ್ಯೆಯನ್ನು 200 ಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಹೇಳಿದರು.

ಕೇಂದ್ರದ ನೀತಿಯಂತೆ 10 ಲಕ್ಷ ಜನಸಂಖ್ಯೆಗೆ ನೂರು ಮೆಡಿಕಲ್ ಸೀಟುಗಳಿರಬೇಕಾಗುತ್ತದೆ.
ನಮ್ಮಲ್ಲಿ ಅದಕ್ಕಿಂತ ಹೆಚ್ಚಿದೆ,ಈ ಹಿಂದೆ ಇಂತಹ ನಿರ್ಬಂಧ ಇರಲಿಲ್ಲ ಇದೊಂದು ರೀತಿ ದಕ್ಷಿಣದ ರಾಜ್ಯಗಳ ವಿರುದ್ದ ಮಲತಾಯಿ ಧೋರಣೆ ಎಂದು ಡಾ.ಶರಣಪ್ರಕಾಶ ಪಾಟೀಲ್ ಬೇಸರ ವ್ಯಕ್ತಪಡಿಸಿದರು.

ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಮೈಸೂರು ಮೆಡಿಕಲ್ ಕಾಲೇಜು ಜ್ಞಾಪ ಕಾರ್ಥಕವಾಗಿ ಮೈಸೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು 5 ಎಕರೆ ಜಾಗ ಗುರುತಿಸಲಾಗಿದ್ದು ಪ್ರಕ್ರಿಯೆ ಆರಂಭವಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಶಾಸಕರಾದ ಹರೀಶ್ ಗೌಡ ,ಸಂಸ್ಥೆಯ ನಿರ್ದೇಶಕರು ಮತ್ತಿತರೊಂದಿಗೆ ಸಚಿವರು ಆಸ್ಪತ್ರೆಯಲ್ಲಿ ರೌಂಡ್ಸ್ ಹೋಗಿ ಬಂದರು.