ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾವನ್ನು ಯಶಸ್ವಗೊಳಿಸಿದ ಸಾರ್ವಜನಿಕರು,ಅಧಿಕಾರಿಗಳು ಹಾಗೂ ಮಾಧ್ಯಮದವರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹಾದೇವಪ್ಪ ಕೃತಜ್ಞತೆ ಸಲ್ಲಿಸಿದರು.
ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಭಾನುವಾರ ನಡೆದ ಉಪಹಾರ ಕೂಟದಲ್ಲಿ ಮಾತನಾಡಿದ ಅವರು,ಆರಂಭದಲ್ಲಿ ವೈಭವದ ದಸರಾ ಆಚರಿಸುತ್ತೇವೆಂದು ಹೇಳಿದ್ದೆವು ಆದರೆ ಮಳೆ ಭಾರಿ ಪ್ರಮಾಣದಲ್ಲಿ ಕೊರತೆಯಾದುದರಿಂದ ಅದ್ದೂರಿಯೂ ಅಲ್ಲದ ಸರಳವೂ ಅಲ್ಲದ ಸಾಂಪ್ರದಾಯಕ ದಸರಾ ಆಯೋಜಿಸಲು ತೀರ್ಮಾನಿಸಲಾಯಿತು ಎಂದು ಹೇಳಿದರು.
ಈ ಬಾರಿಯ ದಸರಾದಲ್ಲಿ ಕಾರ್ಯನಿರ್ವಹಿಸಿದ ಬಹುತೇಕ ಅಧಿಕಾರಿಗಳು ಹೊಸಬರಾದರು ತಮ್ಮ ಜವಾಬ್ದಾರಿಗಳನ್ನ ಸಮರ್ಪಕವಾಗಿ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸಿ 10 ಲಕ್ಷಕ್ಕೂ ಹೆಚ್ಚು ಜನ ಸೇರಿದರೂ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಕಾರ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಸರಾ ದೀಪಾಲಂಕಾರ ನ.5 ರ ವರಗೆ ಇರಲಿದ್ದು, ಈ ಬಾರಿಯ ದೀಪಾಲಂಕಾರದಲ್ಲಿ ಸಾಮಾಜಿಕ ಸಂದೇಶಗಳು, ಪ್ರಜಾಪ್ರಭುತ್ವ , ಸಂವಿಧಾನ, ನಾಲ್ವಡಿಯವರ ಕೊಡುಗೆಗಳು ರಾರಾಜಿಸಿವೆ ಹಾಗೂ ಸಂಬಂಧಿಸಿದ ದಸರಾ ಖರ್ಚು ವೆಚ್ಚಗಳನ್ನು ಜಿಲ್ಲಾಧಿಕಾರಿಗಳು ಶೀಘ್ರವೇ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.
ಒಟ್ಟಾರೆ ದಸರಾ ಯಶಸ್ಸಿಗೆ ಸಹಕಾರ ನೀಡಿದ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು, ಸಚಿವರುಗಳು, ಜನಪ್ರತಿ ನಿಧಿಗಳು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಜಿಲ್ಲಾಡಳಿತ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೆಚ್.ಸಿ.ಮಹಾದೇವಪ್ಪ ತಿಳಿಸಿದರು.

