90 ಕಡೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ 90 ಕಡೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಭ್ರಷ್ಟರಿಗೆ ಶಾಕ್ ನೀಡಿದ್ದಾರೆ.

ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಮುಂದುವರಿದಿದ್ದು ಸೋಮವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.

ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಏಕಾಕಾಲಕ್ಕೆ ದಾಳಿ ಮಾಡಿದ್ದಾರೆ.

ಬೆಂಗಳೂರು, ಚಿತ್ರದುರ್ಗ, ಕಲಬುರಗಿ, ರಾಯಚೂರು, ಹಾಸನ, ಬೀದರ್, ದೇವದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಭ್ರಷ್ಟ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರಿನಲ್ಲಿಯೇ 11 ಕಡೆ ದಾಳಿ ನಡೆದಿದೆ. ಕೆಆರ್‌ ಪುರದಲ್ಲಿನ ಎಆರ್‌ಒ ಚಂದ್ರಪ್ಪ ಬಿರಜ್ಜನವರ್ ಮನೆ ಮೇಲೆ ದಾಳಿ ನಡೆಸಿದ್ದಲ್ಲದೆ ಅವರಿಗೆ ಸಂಬಂಧಪಟ್ಟ ಮೂರು ಕಡೆ ದಾಳಿ ಮಾಡಿದ್ದಾರೆ.

ಬಿಬಿಎಂಪಿ ಹೆಗ್ಗನಹಳ್ಳಿ ವಾರ್ಡ್ ನ ಆರ್.ಆರ್.ನಗರ ವಲಯ ಅಧಿಕಾರಿಯಾಗಿ ರುವ ಚಂದ್ರಪ್ಪ ಅವರ ಕೆ.ಆರ್.ಪುರಂ ನಿವಾಸದಲ್ಲಿ ಶೋಧ ಕಾರ್ಯ ನಡೆಸಲಾಗಿದೆ.

ಈ ಹಿಂದೆ ಲಂಚ ಪಡೆಯುವಾಗ ಚಂದ್ರಪ್ಪ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಭ್ರಷ್ಟಚಾರದ ಆರೋಪ ಹೊತ್ತಿರುವ ಇಬ್ಬರು ಅಧಿಕಾರಿಗಳಾದ ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ನಾಯ್ಕ್,ಸಮಾಜ ಕಲ್ಯಾಣ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಕೃಷ್ಣಮೂರ್ತಿ ಅವರ ಹಿರಿಯೂರು ಪಟ್ಟಣದ ಕುವೆಂಪು ನಗರದ ಮನೆಗಳ ಮೇಲೆ ದಾಳಿ ನಡೆದಿದೆ.

ಚಿತ್ರದುರ್ಗದ ಲೋಕಾಯುಕ್ತ ಎಸ್ಪಿ ವಾಸುದೇವ ರಾವ್ ನೇತೃತ್ವದಲ್ಲಿ ಈ ಎರಡೂ ದಾಳಿ ನಡೆಸಲಾಗಿದೆ.

ಹಾಸನದಲ್ಲಿ ಕೆಪಿಟಿಸಿಎಲ್ ಜೂನಿಯರ್ ಇಂಜಿನಿಯರ್ ಹೆಚ್ ಇ.ನಾರಾಯಣ ಅವರ ಮನೆ, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಲೋಕಾಯುಕ್ತ ಎಸ್‌ಪಿ ಮಲ್ಲಿಕ್, ಡಿವೈಎಸ್‌ಪಿ ತಿರುಮಲೇಶ್, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾ ಬಾಲು, ಶಿಲ್ಪಾ ನೇತೃತ್ವದಲ್ಲಿ ಹಾಸನ ಹೊರವಲಯದ ಬೊಮ್ಮನಾಯಕನ ಹಳ್ಳಿರುವ ನಾರಾಯಣ ಅವರ ನಿವಾಸ ಹಾಗೂ ಗೊರೂರಿನಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿ ದಾಖಲೆ ಪರಿಶೀನಲೆ ನಡೆಸಿದ್ದಾರೆ.

ಹಾವೇರಿಯ ಅರಣ್ಯ ಇಲಾಖೆಯ ಆರ್ ಎಫ್ ಒ ಪರಮೇಶಪ್ಪ ಪೇರಲನವರ್ ಹಾಗೂ ನ್ಯಾಮತಿ ಆರ್ ಎಫ್ಒ ಮಾಲತೇಶ್​ ಮನೆ, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ದಾವಣಗೆರೆ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಏಕಕಾಲಕ್ಕೆ 9 ಕಡೆಗಳಲ್ಲಿ ದಾಳಿ ಮಾಡಿದ್ದಾರೆ.

ಕಲಬುರಗಿಯಲ್ಲಿ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.‌ ಬೀದರ್ ವಲಯ ಅರಣ್ಯಾಧಿಕಾರಿ ಬಸವರಾಜ್ ಡಾಂಗೆ ಮತ್ತು ದೇವದುರ್ಗದ ಕೆಬಿಜೆಎನ್ ಎಲ್ ಇಇ ತಿಪ್ಪಣ್ಣ ಅನ್ನದಾನಿ ಮನೆಗಳ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ

ಲೋಕಾಯುಕ್ತ ಎಸ್ಪಿ ಎಸ್.ಎಸ್.ಕರ್ನೂಲ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.