ನವ ದೆಹಲಿ: ದೀಪಾವಳಿ ಮುಗಿದ ನಂತರ
ನವೆಂಬರ್ 15ರಂದು ಹಲವು ಜೆಡಿಎಸ್ -ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂದು ಉಪ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ಶಿವಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೀಪಾವಳಿ ನಂತರ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳಾಗುತ್ತವೆ ಎಂದು ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ನವೆಂಬರ್ 15ರಂದು ಮತ್ತಷ್ಟು ನಾಯಕರು ನಮ್ಮ ಪಕ್ಷಕ್ಕೆ ಸೇರುತ್ತಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಈಗಿರುವ ಪರಿಸ್ಥಿತಿಯಲ್ಲಿ ನಮ್ಮ ಒಬ್ಬ ಶಾಸಕರನ್ನೂ ಅವರಿಗೆ ಕರೆದುಕೊಳ್ಳಲು ಆಗುವುದಿಲ್ಲ.
ಬಿಜೆಪಿಯಲ್ಲಿ ನಾಯಕತ್ವದ ಬಗ್ಗೆಯೇ ತೀರ್ಮಾನ ಮಾಡಲು ಆಗಿಲ್ಲ, ಬಿಜೆಪಿಯವರು ಗೊಂದಲ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯಲ್ಲೇ ಸಾಕಷ್ಟು ಸಮಸ್ಯೆ ಇದೆ, ಹೀಗಿರುವಾಗ ನಮ್ಮ ಶಾಸಕರನ್ನು ಅವರು ಸೆಳೆದುಕೊಳ್ಳುವುದು ದೂರದ ಮಾತು ಎಂದು ಡಿ ಕೆ ಶಿ ಹೇಳಿದರು.
ಮಹಾರಾಷ್ಟ್ರದಲ್ಲಿ ಸಭೆ ಆಗಿರುವ ಬಗ್ಗೆ ನಾನು ಮಾತನಾಡಲ್ಲ. ಎಲ್ಲಾ ಮೂಮೆಂಟ್ ಗೊತ್ತಿದೆ, ನಿರುದ್ಯೋಗಿಗಳು ಚಪಲಕ್ಕೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಟೀಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಪ್ರಧಾನಿಗಳು ನಮ್ಮನ್ನು ನೆನಪಿಸಿಕೊಳ್ಳುತ್ತಾರೆ ಅದೇ ಸಂತೋಷ.
ನಮ್ಮ ಗ್ಯಾರಂಟಿ, ನಮ್ಮ ಒಗ್ಗಟ್ಟು, ಜನರ ತೀರ್ಮಾನ ಅವರ ನಿದ್ದೆ ಕೆಡಿಸಿದೆ. ಅದಕ್ಕೆ ನೆನಪಿಸಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

