ಮುಖ್ಯ ಮಂತ್ರಿಗಳ ಜನತಾ‌ ದರ್ಶನ: ಅಹವಾಲುಗಳ ಸುರಿಮಳೆ

ಬೆಂಗಳೂರು: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಫುಡ್ ಪಾರ್ಕ್ ನಲ್ಲಿ ಉದ್ಯಮಿ ಮಲ್ಲೇಶಪ್ಪ ಸಿದ್ದಪ್ಪ ಕಲ್ಲೂರ ಅವರಿಗೆ ತಕ್ಷಣ ನಿವೇಶನ ನೋಂದಣಿ ಮಾಡುವಂತೆ ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ‌ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಜನಸ್ಪಂದನದ ವೇಳೆ ಸಿಎಂ ಈ ಆದೇಶ ನೀಡಿದರು.

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಡಿ.ಸಿ. ಸೇರಿದಂತೆ‌ ಜಿಲ್ಲಾ ಮಟ್ಟದ ಅಧಿಕಾರಿಗಳು ಆನ್ ಲೈನ್ ವಿಡಿಯೋ‌ ಸಂವಾದದಲ್ಲಿ ಭಾಗಿಯಾಗಿದ್ದರು.

ಕಲಬುರಗಿಯ ಅಗ್ರೋ ಫುಡ್ ಪಾರ್ಕ್ ಎಂ.ಡಿ. ಮಲ್ಲೇಶಪ್ಪ ಸಿದ್ದಪ್ಪ ಕಲ್ಲೂರ ಅವರು ಜೇವರ್ಗಿಯ ಫುಡ್ ಪಾರ್ಕ್ ನಲ್ಲಿ 2016ರಲ್ಲಿ ನಿವೇಶನ ಖರೀದಿಸಲಾಗಿದೆ, ಅದಕ್ಕೆ ಬೇಕಾದ ಪೂರ್ಣ ಹಣ ಪಾವತಿಸಿದೆ. ಇದುವರೆಗೆ ನಿವೇಶನ ತಮ್ಮ ಹೆಸರಿಗೆ ನೋಂದಣಿ ಆಗಿಲ್ಲ ಎಂದು ಜನಸ್ಪಂದನದಲ್ಲಿ ಸಿ.ಎಂ ಬಳಿ ಅಳಲು ತೋಡಿಕೊಂಡರು.

ವಿಡಿಯೋ ಸಂವಾದದಲ್ಲಿ ಕಲಬುರಗಿಯಿಂದ ಹಾಜರಿದ್ದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರಿಗೆ ಕೂಡಲೆ ನಿವೇಶನ ನೊಂದಣಿ ಮಾಡಿಸುವಂತೆ ಸಿ.ಎಂ ಆದೇಶಿಸಿದರು.

ಕಲಬುರಗಿ ತಾಲೂಕಿನ ಮೇಳಕುಂದಾ (ಬಿ) ಗ್ರಾಮದ ಮಮತಾ ಎಂಬವರು ತಾವು‌ ಬಿ.ಎಫ್.ಟಿ, ಕಾಯಕ ಮಿತ್ರಾ ಹುದ್ದೆಗೆ 2022ರಲ್ಲಿ ಅರ್ಜಿ ಸಲ್ಲಿಸಿದ್ದು, ತಾಲೂಕು ಪಂಚಾಯತ್ ಇ.ಒ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಒ ತಮ್ಮ ಅರ್ಜಿ ಪರಿಗಣಿಸುತ್ತಿಲ್ಲ. ದಯವಿಟ್ಟು ಉದ್ಯೋಗ ನೀಡಬೇಕೆಂದು ಮನವಿ ಮಾಡಿದರು ಅದಕ್ಕೆ ಸೂಕ್ತವಾಗಿ ಪರಿಶೀಲಿಸುವಂತೆ ಸಿ.ಎಂ ಸೂಚಿಸಿದರು.

ಹೀಗೆ ಒಂದಲ್ಲಾ ಎರಡಲ್ಲಾ ನೂರಾರು ಸಮಸ್ಯೆಗಳನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಂಡರು.

ರಾಜ್ಯದಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದರು.

ಪ್ರತಿಯೊಬ್ಬ ಅರ್ಜಿದಾರರ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿದ ಮುಖ್ಯಮಂತ್ರಿಗಳು ನೇರವಾಗಿ ಆಯಾ ಜಿಲ್ಲೆಯ ಡಿ.ಸಿ. ಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು.

ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿವಿಧ ಇಲಾಖೆವಾರು ಸುಮಾರು 1,147 ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ ತಕ್ಷಣಕ್ಕೆ ಬಹಳಷ್ಟು ಅರ್ಜಿಗಳನ್ನು ಸ್ಥಳದಲ್ಲೇ ಪರಿಹರಿಸಲಾಯಿತು.