ಸರಕಾರದ ತಪ್ಪುಗಳ ಕಿವಿ ಹಿಂಡುವ ಕಾರ್ಯ ಮಾಡುತ್ತೇವೆ -ಆರ್.ಅಶೋಕ್

ಬೆಂಗಳೂರು: ಬೆಳಗಾವಿ ಅಧಿವೇಶನ ನಮ್ಮ ಪಕ್ಷಕ್ಕೆ ಅತ್ಯಂತ ಪ್ರಮುಖವಾದುದು, ರಾಜ್ಯದ ಕಾಂಗ್ರೆಸ್ ಸರಕಾರ ಕೇವಲ ಆರು ತಿಂಗಳಲ್ಲಿ 60 ತಪ್ಪುಗಳನ್ನು ಮಾಡಿದೆ, ಅಧಿವೇಶನದಲ್ಲಿ ಈ ಸಂಬಂಧ ಕಿವಿ ಹಿಂಡುವ ಕಾರ್ಯ ಮಾಡುತ್ತೇವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್  ತಿಳಿಸಿದರು.

ವಿಧಾನಸೌಧಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಪ್ರಾರಂಭದಲ್ಲೇ ಟ್ರಾನ್ಸ್ ಫರ್ ದಂಧೆಯ ಅಂಗಡಿಗಳನ್ನು ತೆರೆದಿದ್ದಾರೆ ಎಂದು ‌ವ್ಯಂಗ್ಯವಾಡಿದರು.

ಬೆಂಗಳೂರಿನಲ್ಲಿ ದಾಳಿ ನಡೆಸಿದಾಗ ಸುಮಾರು100 ಕೋಟಿಗೂ ಹೆಚ್ಚು ಕಳ್ಳಹಣ ಸಿಕ್ಕಿದ್ದು, ಇದು ಟ್ರಾನ್ಸ್‌ಫರ್ ದಂಧೆಯ ಸ್ಪಷ್ಟರೂಪ ಎಂದು ಆರೋಪಿಸಿದರು.

ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಜನತೆಗೆ ಮೋಸ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಮಿತ್ರ ಸ್ಟಾಲಿನ್ ಇದ್ದಾರೆಂದು, ಅವರಿಗೆ ಸಹಾಯ ಮಾಡಲು ಹಳೆ ಮೈಸೂರಿನ ಭಾಗದ ಜನರಿಗೆ ಮೋಸ ಮಾಡಲಾಗಿದೆ ಎಂದು ದೂರಿದರು.

ವಿರೋಧ ಪಕ್ಷದ ನಾಯಕನಾಗಿ, ನಮ್ಮೆಲ್ಲ 66 ಜನ ಶಾಸಕರು, ಜೆಡಿಎಸ್‍ನ 19 ಮಂದಿ ಸೇರಿ ನಿಲುವಳಿ ಸೂಚನೆ ಮಂಡಿಸುತ್ತೇವೆ ಎಂದು ಅಶೋಕ್ ತಿಳಿಸಿದರು.

ಈಗಾಗಲೇ ನಾನು, ನಮ್ಮ ರಾಜ್ಯಾಧ್ಯಕ್ಷರು ಮತ್ತು ಜೆಡಿಎಸ್‍ನ ಕುಮಾರಸ್ವಾಮಿ ಮತ್ತಿತರ ಪ್ರಮುಖರ ಜೊತೆ ಮಾತನಾಡಿದ್ದೇವೆ, ನಾವೆಲ್ಲರೂ ಸೇರಿ ಸರಕಾರಕ್ಕೆ ಕಿವಿ ಹಿಂಡುವ ಕೆಲಸ ಮಾಡುತ್ತೇವೆ.

236 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳಲ್ಲಿ ತೀವ್ರ ಬರಗಾಲ ಛಾಯೆ ಇದೆ. ಜೂನ್‍ನಲ್ಲಿ ಸಣ್ಣ ಮಳೆ, ಜುಲೈನಲ್ಲಿ ಮಳೆ ಇರಲಿಲ್ಲ. ಆಗಸ್ಟ್‍ನಲ್ಲಿ ಶೇ 73 ಮಳೆ ಕೊರತೆ ಆಗಿದೆ. ರಾಜ್ಯ ಸರಕಾರ, ಸಚಿವರು ಯಾವುದೇ ಕ್ರಮ ಕೈಗೊಳ್ಳದೆ ವಿಧಾನಸೌಧದಲ್ಲಿ ಕುಳಿತು ಮೊಸಳೆಕಣ್ಣೀರು ಸುರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎನ್‍ಇಪಿ ಅಡಿಯಲ್ಲಿ ತಪ್ಪು ಕಂಡು ಹಿಡಿಯುವುದುನ್ನು ಪ್ರಶ್ನೆ ಮಾಡುತ್ತೇವೆ. ಒಕ್ಕಲಿಗ ಸಮುದಾಯ, ಲಿಂಗಾಯತ ಸಮುದಾಯ ಮೊದಲಾದವರ ವಿರೋಧದ ನಡುವೆ ಕಾಂತರಾಜ್ ವರದಿ ಅನುಷ್ಠಾನಕ್ಕೆ ಮುಂದಾದುದನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಿದ್ದೇವೆ ಎಂದು ತಿಳಿಸಿದರು.

ನೀರಾವರಿ ಯೋಜನೆಗಳ ವಿಚಾರ, ಅನುಷ್ಠಾನದಲ್ಲಿ ವಿಫಲತೆ, ಬಜೆಟ್‍ನಲ್ಲಿ ನೀರಾವರಿಗೆ ಮೋಸ ಮಾಡಿದ್ದನ್ನು ತೆಗೆದುಕೊಳ್ಳುತ್ತೇವೆ. ಪ್ರಮುಖವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಆಗದಿರುವುದನ್ನೂ ಪ್ರಶ್ನಿಸುತ್ತೇವೆ ಎಂದು ಅಶೋಕ್ ಹೇಳಿದರು.