ರಾಜ್ಯದ ಅಭಿವೃದ್ಧಿಯಲ್ಲಿ ಎಸ್.ನಿಜಲಿಂಗಪ್ಪನವರ ಕೊಡುಗೆ ಅಪಾರ : ಸಿಎಂ ಸಿದ್ದರಾಮಯ್ಯ ಬಣ್ಣನೆ

ಬೆಂಗಳೂರು: ಐವತ್ತು ವರ್ಷಗಳ ಕಾಲ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತೊಡಗಿದ್ದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಕರ್ನಾಟಕದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದರು.

ಭಾನುವಾರ ದಿವಂಗತ ಎಸ್.ನಿಜಲಿಂಗಪ್ಪನವರ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ನಮ್ಮ ರಾಜ್ಯ ಕರ್ನಾಟಕವೆಂದು ನಾಮಕರಣವಾದ ನಂತರದ ಮೊದಲ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು‌, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು ಮಹಾತ್ಮಾ ಗಾಂಧಿ ಹಾಗೂ ವಿನೋಬಾ ಭಾವೆಯವರ ಆದರ್ಶಗಳಿಂದ ಪ್ರೇರಿತರಾಗಿದ್ದರು ಎಂದು ತಿಳಿಸಿದರು.

ನಿಜಲಿಂಗಪ್ಪನವರು ಕರ್ನಾಟಕದ ಏಕೀಕರಣದಲ್ಲಿ ಭಾಗಿಯಾಗಿದ್ದರು. ಅವರ ಅವಧಿಯಲ್ಲಿ ರೈತರ ಒಳಿತಿಗಾಗಿ ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದರು. ಅವಿಭಜಿತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಬೇಕು ಎಂದು ಸಿಎಂ ತಿಳಿಸಿದರು.

ಅಲ್ಪಸಂಖ್ಯಾತರಿಗೆ ಆರ್ಥಿಕ ಸೌಲಭ್ಯವಿಲ್ಲವೆನ್ನುವ ಕಾಂಗ್ರೆಸ್ ನವರ ಮನೆಯಲ್ಲಿಯೇ ಅಪಾರ ಹಣ ದೊರೆಯುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾರ ಬಳಿ ಬೇನಾಮಿ ಹಣ ದೊರೆತರೂ ಅದು ಕಾನೂನು ರೀತಿ ತಪ್ಪು, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲೇ ಬೇಕು ಎಂದು ಹೇಳಿದರು.

ಆದರೆ ಕಾಂಗ್ರೆಸ್ ಪಕ್ಷದವರನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿಗಳನ್ನು ಮಾಡಲಾಗುತ್ತಿದೆ. ಬಿಜೆಪಿಯವರ ಮೇಲೆ ಐಟಿದಾಳಿಗಳು ಆಗುತ್ತಿಲ್ಲ, ಬಿಜೆಪಿಯವರ ಮನೆಗಳ ಮೇಲೂ ಐಟಿ ದಾಳಿ ನಡೆದರೆ ಬೇನಾಮಿ ಹಣ ದೊರೆಯಬಹುದು ಎಂದು ತಿರುಗೇಟು ನೀಡಿದರು.