ಗಾಂಧಿನಗರ: ಅಮೆರಿಕದ ಪೆಂಟಗನ್ ಮೀರಿಸುವ ಹೊಸ ಕಚೇರಿ ಸಂಕೀರ್ಣವು ಭಾರತದಲ್ಲಿ ತಲೆ ಎತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದರು.
ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ ಕೇಂದ್ರವಾದ ಸೂರತ್ ಡೈಮಂಡ್ ಬೋರ್ಸ್ ಅನ್ನು ಮೋದಿ ಅವರು ಭಾನುವಾರ ಉದ್ಘಾಟಿಸಿ ಶುಭಹಾರೈಸಿದ್ದಾರೆ.
ಈ ಮೂಲಕ ಗುಜರಾತ್‌ನ ಸೂರತ್ ನಗರವು ವಜ್ರದ ರಾಜಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ಖಚಿತಪಡಿಸಿದೆ.
ಡೈಮಂಡ್ ಬೋರ್ಸ್ ವಿಶೇಷತೆ:
ಸೂರತ್ ಡೈಮಂಡ್ ಬೋರ್ಸ್ 35.54 ಎಕರೆ ಭೂಪ್ರದೇಶದಲ್ಲಿ, 3,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
ಈ ಮೂಲಕ ಇದು 1943ರಲ್ಲಿ 6.5 ಮಿಲಿಯನ್ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಪೆಂಟಗನ್ ಸಂಕೀರ್ಣ ಕಚೇರಿಯನ್ನೂ ಹಿಂದಿಕ್ಕಿದೆ.
4,500ಕ್ಕೂ ಹೆಚ್ಚು ನೆಟ್‌ವರ್ಕ್ ಕಚೇರಿಗಳನ್ನು ಒಳಗೊಂಡಿದ್ದು ವಿಶ್ವದಲ್ಲೇ ಅತಿದೊಡ್ಡ ಕಚೇರಿ ಸಂಕೀರ್ಣ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಸೂರತ್‌ನ ಡೈಮಂಡ್ ಬೋರ್ಸ್ ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯಾಪಾರದ ಜಾಗತಿಕ ಕೇಂದ್ರವಾಗಲಿದೆ.
65,000ಕ್ಕೂ ಹೆಚ್ಚು ವಜ್ರದ ವ್ಯಾಪಾರಿಗಳಿಗೆ ಒನ್‌ಸ್ಟಾಪ್ ಡೆಸ್ಟಿನೇಶನ್ ಆಗಿದ್ದು, ಕಟ್ಟರ್, ಪಾಲಿಷರ್ ವಜ್ರಗಳು ಹಾಗೂ ವಜ್ರದ ಆಭರಣಗಳ ವ್ಯಾಪಾರ, ವಹಿವಾಟು ನಡೆಯಲಿದೆ. ಈ ಕಟ್ಟಡವು 175 ದೇಶಗಳ 4,200 ವ್ಯಾಪಾರಿಗಳನ್ನು ಒಳಗೊಂಡಿದೆ.
ಆಮದು-ರಫ್ತಿಗಾಗಿ ಅತ್ಯಾಧುನಿಕ `ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್’ (Customs Clearance House) ಅನ್ನೂ ಹೊಂದಿದೆ. ಜೊತೆಗೆ ಚಿಲ್ಲರೆ ಆಭರಣ ವ್ಯಾಪಾರಕ್ಕಾಗಿ ಆಭರಣ ಮಳಿಗೆ ಮತ್ತು ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಸುರಕ್ಷಿತ ವಾಲ್ಟ್ಸ್‌ಗಳ ಸೌಲಭ್ಯವೂ ಇದೆ.
ವಿಶ್ವದಲ್ಲಿಯೇ ಮೊದಲಿಗೆ ದಕ್ಷಿಣ ಭಾರತದಲ್ಲಿ ವಜ್ರದ ನಿಕ್ಷೇಪಗಳು 9ನೇ ಶತಮಾನದಲ್ಲಿ ಪತ್ತೆಯಾದವು. ಅಲ್ಲಿಂದ 18ನೇ ಶತಮಾನದ ಮಧ್ಯಭಾಗದವರೆಗೆ ಭಾರತವು ವಜ್ರದ ಏಕೈಕ ಉತ್ಪಾದಕ ರಾಷ್ಟ್ರವಾಗಿತ್ತು.
ವಜ್ರದ ಹರಳುಗಳನ್ನು ವಿನ್ಯಾಸಗೊಳಿಸಲು ಗುಜರಾತ್ ರಾಜ್ಯ ಪ್ರಸಿದ್ದಿಯಾಗಿದೆ.
ವಜ್ರಗಳನ್ನು ವಿನ್ಯಾಸಗೊಳಿಸಿ ಆಭರಣಗಳಾಗಿ ರೂಪಿಸಿ ಒದಗಿಸುವ ಕಾರ್ಯವನ್ನು ಭಾರತದಲ್ಲಿ ಸುಮಾರು 25 ಕಂಪನಿಗಳು ಮಾಡುತ್ತಿವೆ. ಇದೀಗ ಭಾರತದಲ್ಲೇ ಬೃಹತ್ ಕಚೇರಿ ಸಂಕೀರ್ಣ ತೆರೆಯುತ್ತಿರುವುದು ಮತ್ತೊಂದು ಹಿರಿಮೆಯಾಗಿದೆ.

