ಹುಬ್ಬಳ್ಳಿ: ಕೋಲಾರದ ಮಾಲೂರಿನಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಶೌಚಾಲಯದ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣದ
ವಿಚಾರ ನನ್ನ ಗಮನಕ್ಕೆ ಬಂದಿದೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಡಿ.17 ರಂದು ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಅವರ ಹುಟ್ಟು ಹಬ್ಬ.ಹಾಗಾಗಿ ಹುಬ್ಬಳ್ಳಿಯಲ್ಲಿ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದ ನಂತರ ಸಿಎಂ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಇದು ಕ್ಷುಲ್ಲಕ ವಿಚಾರ ಹೀಗೆ ಎಲ್ಲೂ ನಡೆಯಬಾರದು,ಶೌಚಾಲಯ ಪ್ರಕರಣದ ವರದಿ ತರಿಸಿಕೊಳ್ಳುತ್ತೇನೆ ಯಾರೆ ತಪ್ಪಿತಸ್ಥರಿದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಿನ್ನೆ ಆರೋಗ್ಯ ಇಲಾಖೆ ಸಚಿವರ ಜೊತೆ ನಾನು ಮಾತಾಡಿದ್ದೇನೆ. ತಜ್ಞರ ಜೊತೆ ಸಭೆ ಮಾಡಲು ಸೂಚಿಸಿದ್ದೇನೆ, ಕೋವಿಡ್ ತಡೆಯಲು ಎಲ್ಲಾ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದ್ದು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಿದ್ದರಾಮಯ್ಯ ತಿಳಿಸಿದರು.
ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ. ಇದೊಂದು ಅಮಾನವೀಯ ಘಟನೆ, ನಾಗರಿಕ ಸಮಾಜದಲ್ಲಿ ಇಂತಹ ಘಟನೆ ನಡೆಯಬಾರದು ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.
ಬಿಜೆಪಿಯವರು ಈ ಪ್ರಕರಣವನ್ನು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಕರಣ ಗೊತ್ತಾದ ತಕ್ಷಣ ಗೃಹ ಸಚಿವರು ಮಹಿಳೆಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಎಲ್ಲಿ ಸರ್ಕಾರ ಫೇಲ್ ಆಗಿದೆ ಎಂದು ಪ್ರಶ್ನಿಸಿದರು.
ಉತ್ತರ ಪ್ರದೇಶದಲ್ಲಿ ಶಾಸಕ 9 ವರ್ಷದ ಹುಡುಗಿ ಮೇಲೆ ರೇಪ್ ಮಾಡಿ ಜೈಲು ಸೇರಿದ್ದಾನೆ, ಇಂತಹ ಎಂಎಲ್ಎ ಇಟ್ಟುಕೊಂಡು ಹೆಣ್ಣುಮಕ್ಕಳು ಮೇಲೆ ದೌರ್ಜನ್ಯ ಮಾಡುವ ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಸಿಎಂ ಪ್ರಶ್ನಿಸಿದರು.
ಯಾರ ಕಾಲದಲ್ಲಿ ಎಷ್ಟು ಪ್ರಕರಣ ಆಗಿವೆ ಅಂತ ನ್ಯಾಷನಲ್ ಕ್ರೈಂ ಬ್ಯೂರೋ ಅವರ ವರದಿ ನೋಡಲಿ. ಯಾರ ಮೇಲೆ ದೌರ್ಜನ್ಯ ಆದರೂ ಅವರ ಮೇಲೆ ನಾವು ಕಠಿಣ ಕ್ರಮ ತೆಗೆದುಕೊಳ್ಳತ್ತವೆ. ಬೆಳಗಾವಿಯಲ್ಲಿ ನಡೆದಿದ್ದು ಅನಾಗರಿಕ ಘಟನೆ. ಇದು ನಾಗರಿಕ ಸಮಾಜದಲ್ಲಿ ನಡೆಯಬಾರದು ಎಂದು ಸಿಎಂ ಹೇಳಿದರು.

