ಶ್ರೀಹರಿಕೋಟಾ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೊಸ ವರ್ಷದ ಮೊದಲ ದಿನವೇ ಐತಿಹಾಸಿಕ ಉಡಾವಣೆ ಮಾಡಿದೆ.
ಎಕ್ಸ್‌ಪೋಸ್ಯಾಟ್ ಉಪಗ್ರಹವನ್ನು ಹೊತ್ತ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಸಿ58 ನೌಕೆ ಯಶಸ್ವಿಯಾಗಿ ನಭಕ್ಕೆ ಹಾರಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಯಿತು.
ಆ ಮೂಲಕ ಇಸ್ರೋ ಹೊಸ ವರ್ಷದ ದಿನವೇ ಇತಿಹಾಸ ಸೃಷ್ಟಿಸಿದೆ. ದೇಶದ ಮೊದಲ ಎಕ್ಸ್-ರೇ ಪೋಲರಿಮೀಟರ್ ಉಪಗ್ರಹ ಎಕ್ಸ್‌ಪೋಸ್ಯಾಟ್ (XPoSat) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಇದರ ಜೊತೆಗೆ ಪಿಎಸ್‌ಎಲ್‌ವಿ ಇತರ ಹತ್ತು ಉಪಗ್ರಹಗಳನ್ನು ಹೊತ್ತೊಯ್ದಿದೆ. ಈ ಉಪಗ್ರಹಗಳನ್ನು ಸ್ಟಾರ್ಟ್‌ಅಪ್ಸ್ ,ಶೈಕ್ಷಣಿಕ ಸಂಸ್ಥೆಗಳು ಮತ್ತು ಇಸ್ರೋ ಕೇಂದ್ರಗಳು ನಿರ್ಮಾಣ ಮಾಡಿವೆ.
ಎಕ್ಸ್‌ಪೋಸ್ಯಾಟ್ ಮಿಷನ್ ಅನ್ನು ತೀವ್ರವಾದ ಎಕ್ಸ್-ರೇ ಮೂಲಗಳ ಧ್ರುವೀಕರಣವನ್ನು ತನಿಖೆ ಮಾಡಲು ವಿನ್ಯಾಸಗೊಳಿಸಲಾಗಿದ್ದು, 2021ರಲ್ಲಿ ಬಿಡುಗಡೆಯಾದ ನಾಸಾದ ಇಮೇಜಿಂಗ್ ಎಕ್ಸ್-ರೇ ಪೊಲರಿಮೆಟ್ರಿ ಎಕ್ಸ್‌ಪ್ಲೋರರ್ (IXPE) ನಂತರ ಈ ಮಿಷನ್ ಭಾರತದ ಮೊದಲ ಮೀಸಲಾದ ಪೋಲರಿಮೀಟರ್ ಮಿಷನ್ ಮಾತ್ರವಲ್ಲದೆ ವಿಶ್ವದ ಎರಡನೆಯ ಉಪಗ್ರಹವಾಗಿದೆ.
ಪಲ್ಸಾರ, ಕಪ್ಪು ಕುಳಿ ಎಕ್ಸ್-ರೇ ಬೈನರಿಗಳು, ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್‌ಗಳು, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಉಷ್ಣವಲ್ಲದ ಸೂಪರ್‌ನೋವಾ ಅವಶೇಷಗಳನ್ನು ಒಳಗೊಂಡಂತೆ ವಿಶ್ವದಲ್ಲಿ ತಿಳಿದಿರುವ 50 ಪ್ರಕಾಶಮಾನವಾದ ಮೂಲಗಳನ್ನು ಅಧ್ಯಯನ ಮಾಡುವ ಗುರಿಯನ್ನು ಎಕ್ಸ್‌ಪೋಸ್ಯಾಟ್ ಮಿಷನ್ ಹೊಂದಿದೆ,ಜತೆಗೆ ಕಪ್ಪು ಕುಳಿಗಳ ಕುರಿತು ಅಧ್ಯಯನ ಮಾಡಲಿದೆ.

