ಕರಸೇವಕರ ಬಂಧನ: ದ್ವೇಷದ ರಾಜಕಾರಣ ಮಾಡಿಲ್ಲ -ಸಿದ್ದರಾಮಯ್ಯ

ಕೊಪ್ಪಳ: ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನದಲ್ಲಿ ನಾವು ಯಾವುದೇ ದ್ವೇಷದ ರಾಜಕಾರಣ ಮಾಡುವುದಾಗಲಿ, ನಿರಪರಾಧಿಗಳನ್ನು ಬಂಧಿಸುವ ಕೆಲಸವಾಗಲಿ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಇಂದು ಕೊಪ್ಪಳ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ತಪ್ಪು ಮಾಡಿದವರಿಗೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಹಳೇ ಪ್ರಕರಣಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ. ಅದರ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ, ನ್ಯಾಯಾಲಯದ ಸೂಚನೆ ಇದ್ದರೆ, ಅದರಂತೆಯೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಅತಿಥಿ ಉಪನ್ಯಾಸಕರು ಪಾದಯಾತ್ರೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿ, ಅವರೊಂದಿಗೆ  ಮಾತನಾಡಿದ್ದರೂ ಪಾದಯಾತ್ರೆ ಮಾಡುತ್ತಿದ್ದಾರೆ. ಅವರನ್ನು ಖಾಯಂ ಮಾಡಿ ಎಂದು ಬೇಡಿಕೆ ಇದೆ. ಸಧ್ಯಕ್ಕೆ ಖಾಯಂ ಮಾಡುವುದು ಕಷ್ಟದ ಕೆಲಸ ಎಂದು ತಿಳಿಸಿದರು.

ರಾಮಮಂದಿರ ಉದ್ಘಾಟನೆಗೆ ಕೇವಲ ರಾಮಭಕ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ರಾಮಮಂದಿರದ ಮುಖ್ಯ ಅರ್ಚಕರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ  ಯಾರಿಗೆ ಆಹ್ವಾನ ಹೋಗಿದೆ , ಬಿಟ್ಟಿದೆ ಎಂದು ಗೊತ್ತಿಲ್ಲ ಆಹ್ವಾನ ಕೊಟ್ಟವರು ಹೋಗುತ್ತಾರೆ, ಇಲ್ಲದವರು ಇಲ್ಲ  ಎಂದು ಹೇಳಿದರು.

ಬರ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ, ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ 2 ಸಾವಿರ ರೂ. ಕೊಡಲಾಗುತ್ತದೆ. ಆಧಾರ್ ಲಿಂಕ್ ಮಾಡಿದ ನಂತರ ಮೊತ್ತ ರೈತರಿಗೆ ತಲುಪಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.