ಮಂದಿರ ಉದ್ಘಾಟನೆ ಸಮಯದಲ್ಲಿ ಕಾಂಗ್ರೆಸ್‌ನಿಂದ ಬೆದರಿಕೆ ಯತ್ನ-ಆರ್‌.ಅಶೋಕ

ಬೆಂಗಳೂರು: ಹಳೆಯ ಪ್ರಕರಣಗಳನ್ನು ಮರು ಪರಿಶೀಲಿಸುವ ಮೂಲಕ ಕಾಂಗ್ರೆಸ್‌ ಸರ್ಕಾರ ರಾಮಭಕ್ತರಲ್ಲಿ ಭಯ ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದೆ. ಆದರೆ ರಾಮಭಕ್ತರ ನೆರವಿಗೆ ಬಿಜೆಪಿ ನಿಲ್ಲಲಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಅಭಯ ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮಜನ್ಮಭೂಮಿ ಹೋರಾಟದಲ್ಲಿ ನಾನು ಕೂಡ ಪಾಲ್ಗೊಂಡಿದ್ದೆ ಎಂದು ತಿಳಿಸಿದರು.

ಕರಸೇವೆಗೆ ಯಾರು ಹೋಗಿದ್ದಾರೆ ಎಂದು ಈಗ ಪೊಲೀಸರು ಹುಡುಕುತ್ತಿದ್ದಾರೆ. ಈ ಮೂಲಕ ರಾಮಭಕ್ತರಿಗೆ ಸಂದೇಶ ನೀಡುತ್ತಿದ್ದಾರೆ.

ರಾಮಮಂದಿರ ಉದ್ಘಾಟಿಸುವ ಸಮಯದಲ್ಲೇ ಹಳೆ ಪ್ರಕರಣ ಪರಿಶೀಲನೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಈ ರೀತಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಆದರೆ ರಾಮಭಕ್ತರಿಗೆ ಕಷ್ಟ ಬರದಂತೆ ಬಿಜೆಪಿ ಅವರ ನೆರವಿಗೆ ನಿಲ್ಲಲಿದೆ ಎಂದು ತಿಳಿಸಿದರು.

ಇದು 31 ವರ್ಷದ ಹಳೆಯ ಪ್ರಕರಣ, ಇದರಲ್ಲಿ ಮೂರ್ನಾಲ್ಕು ಜನರು ಮೃತಪಟ್ಟಿದ್ದಾರೆ. ಇಷ್ಟಿದ್ದರೂ ನೋಟಿಸ್‌ ಕೂಡ ನೀಡದೆ ಕರಸೇವಕರನ್ನು ಬಂಧಿಸಿದ್ದಾರೆ.

ಒಬ್ಬ ಆಟೋ ಚಾಲಕ ವರ್ಷಪೂರ್ತಿ ಅಲ್ಲೇ ಆಟೋ ಚಲಾಯಿಸಿಕೊಂಡು ದುಡಿಯುತ್ತಿದ್ದಾನೆ.ಆತ ತಲೆಮರೆಸಿಕೊಂಡಿದ್ದ ಎಂಬ ನೆಪ ಹೇಳಿ ಆತನನ್ನು ಬಂಧಿಸಿದೆ‌,ಇದು ಮಾನ,ಮರ್ಯಾದೆ ಇಲ್ಲದ‌ ಸರ್ಕಾರ ಎಂದು ಟೀಕಿಸಿದರು.ಹಳೆ ಪ್ರಕರಣ ಎಂದಮೇಲೆ ಡಿಜೆ ಹಳ್ಳಿ, ಕೆಜಿ ಹಳ್ಳಿಯ ಪ್ರಕರಣ, ಪಾಪ್ಯುಲರ್‌ ಫ್ರಂಟ್‌ ಮೊದಲಾದ ದೇಶದ್ರೋಹಿ ಸಂಘಟನೆಗಳ ಪ್ರಕರಣಗಳನ್ನು ಕೂಡಾ ಪರಿಶೀಲಿಸಬೇಕಿತ್ತು ಎಂದು ಅಶೋಕ್ ಹೇಳಿದರು.