ಬೆಂಗಳೂರು: ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ನೀಡಬೇಕಿದೆ ಏಕೆಂದರೆ, ಗೋದ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರು ಆಗಬಹುದು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮ ಅಲ್ಲ, ಇದೊಂದು ರಾಜಕೀಯ ಕಾರ್ಯಕ್ರಮ ಆಗುತ್ತಿದೆ ಎಂದು ಟೀಕಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ನಾವೆಲ್ಲರೂ ಹೋಗುತ್ತಿದ್ದೆವು. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ಧಾರ್ಮಿಕ ಮುಖಂಡರು ಭಾಗಿ ಆಗಬೇಕಿತ್ತು. ಶಂಕರಾಚಾರ್ಯರು ಮೂಲ ಗುರುಗಳು. ಅದೇ ರೀತಿ ಧರ್ಮ ಗುರುಗಳು ನಡೆಸಿಕೊಟ್ಟಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ ಆಗುತ್ತಿತ್ತು ಎಂದು ಹೇಳಿದ್ದಾರೆ.
ಮೋದಿಯ ಧರ್ಮವೇ ಇನ್ನೂ ಯಾವುದು ಅಂತ ಗೊತ್ತಾಗಿಲ್ಲ. ಅಮಿತ್ ಶಾ ಧರ್ಮವೇ ಯಾವುದೂ ಅಂತ ಗೊತ್ತಾಗಿಲ್ಲ. ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು. ಗೋದ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರೂ ಆಗಬಹುದು.ಹೀಗೆ ನಮಗೆ ಮಾಹಿತಿ ಸಿಗುತ್ತಿದೆ, ಮಾಹಿತಿ ಇದ್ದೇ ಹೇಳುತ್ತಿದ್ದೇನೆ. ಇವು ನನ್ನ ವೈಯಕ್ತಿಕ ಹೇಳಿಕೆ, ಪಕ್ಷಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಕರಸೇವಕರ ಬಂಧನ ಕುರಿತು ಮಾತನಾಡಿ, ಹೋರಾಟಕ್ಕೂ ಅಪರಾಧಕ್ಕೂ ವ್ಯತ್ಯಾಸ ಇದೆ. ಕರಸೇವಕ ಅಂತಾ ಯಾವುದೋ ಅಪರಾಧ ಪ್ರಕರಣದಲ್ಲಿ ಇರುವವರನ್ನು ಹಾಗೆಯೇ ಬಿಡಲು ಆಗುವುದಿಲ್ಲ. ಬಂಧಿತನ ಮೇಲೆ 13 ಕೇಸ್ ಇದೆ. ಕಾನೂನುಬಾಹಿರ ಅಪರಾಧ ಮಾಡಿದ್ದಾರೆ. ಧರ್ಮದ ಹೆಸರಲ್ಲಿ ಏನೇನು ಕೆಲಸ ಮಾಡಿದ್ದಾರೆ ಅಂತಾ ಗೊತ್ತಿದೆ ಎಂದು ತಿಳಿಸಿದ್ದಾರೆ.
ಬಿಜೆಪಿಯವರು ಈಗ ಬೊಬ್ಬೆ ಹೊಡೆಯುತ್ತಿದ್ದಾರೆ. ಶಾಂತಿ ಕದಡುವ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲೇಬೇಕು. 30 ವರ್ಷ ಅವರನ್ನು ಬಿಟ್ಟಿದ್ದೇ ತಪ್ಪು. ಬಾಬರಿ ಮಸೀದಿ ಧ್ವಂಸ ಮಾಡಿದ್ದು, ಅಪರಾಧವೇ. ಎಲ್.ಕೆ.ಅಡ್ವಾಣಿಯವರ ಮೇಲೆ ಇರುವ ಕೇಸೇ ಇನ್ನೂ ಕ್ಲಿಯರ್ ಆಗಿಲ್ಲ, ಇದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

