ಬೆಂಗಳೂರು: ತಹಶೀಲ್ದಾರ್ ಕಚೇರಿಗೆ ಬರುವವರ ಕಣ್ಣೀರು ಒರೆಸುವುದಕ್ಕಿಂತ ಪುಣ್ಯದ ಕೆಲಸ ಬೇರೆ ಇಲ್ಲ, ಮಾಸಲು ಬಟ್ಟೆಯಲ್ಲಿ ಚಡ್ಡಿಯಲ್ಲಿ ಬರುವ ಬಡವರ ಕಣ್ಣೀರು ಒರೆಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಟಿ ಬೀಸಿದರು.
ಕರ್ನಾಟಕ ಆಡಳಿತಾ ಸೇವಾ ಅಧಿಕಾರಿಗಳ ಸಂಘದ 2024ನೇ ಸಾಲಿನ ದಿನಚರಿ ಮತ್ತು ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿ ಸಿಎಂ ಮಾತನಾಡಿದರು.
ಸವೆದ ಚಪ್ಪಲಿ, ಹರಕಲು ಚೆಡ್ಡಿ, ಮಾಸಿದ ಬಟ್ಟೆ, ಅವಿದ್ಯಾವಂತರ ಪರವಾಗಿ ನಿಮ್ಮಗಳ ಹೃದಯ ಮಿಡಿಯಬೇಕು. ನೀವು ಒಳ್ಳೆ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ. ಈ ಜವಾಬ್ದಾರಿಯನ್ನು ನಿರ್ವಹಿಸಿ, ಮಧ್ಯವರ್ತಿಗಳನ್ನು ನಿಮ್ಮ ಕಚೇರಿ ಬಳಿ ಸೇರಿಸದೆ ಜನರ ಸೇವೆ ಮಾಡಿ ಎಂದು ಸಲಹೆ ನೀಡಿದರು.
ನಾವು ನೀವು ರಾಜ್ಯದ 7 ಕೋಟಿ ಜನರ ಹಿತ ಕಾಯುವುದಕ್ಕಾಗಿ ಇದ್ದೇವೆ. ರಾಜಕಾರಣಿಗಳು ಜನರಿಂದ ರಿನೀವಲ್ ಆದರೆ ಮಾತ್ರ ಐದು ವರ್ಷದ ಬಳಿಕವೂ ಜನ ಸೇವೆಯಲ್ಲಿ ಇರುತ್ತಾರೆ, ಆದರೆ ಕೆಎಎಸ್ ಅಧಿಕಾರಿಗಳು 30 ವರ್ಷಗಳ ಕಾಲ ನಿರಂತರ ಜನ ಸೇವೆಯಲ್ಲಿ ಇರುತ್ತೀರಿ. ಆದ್ದರಿಂದ ಹೆಚ್ಚು ಜನಪರವಾಗಿ ಇದ್ದು ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಎಂದು ಕರೆ ನೀಡಿದರು.
ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಜನರು ಸವಲತ್ತುಗಳನ್ನು ಒದಗಿಸಿದ್ದಾರೆ. ಜನರ ತೆರಿಗೆ ಹಣದಲ್ಲಿ ನಮಗೆ ಸವಲತ್ತುಗಳು ಸಿಕ್ಕಿವೆ. ಸುಗಮ ಜನಪರ ಆಡಳಿತ ಕೊಡಲಿ ಎಂಬ ಕಾರಣದಿಂದ ಜನರಿಂದ ನಮಗೆ ಸವಲತ್ತು ಸಿಕ್ಕಿವೆ,ಹಾಗಾಗಿ ಜನರ ಅಭ್ಯದಯ ನಮ್ಮ ಗುರಿ ಆಗಬೇಕು ಎಂದು ಸಿಎಂ ಹೇಳಿದರು.
ಬಲಾಡ್ಯರು ದುರ್ಬಲರ ಮೇಲೆ ದೌರ್ಜನ್ಯ ನಡೆಸದಂತೆ ಎಚ್ಚರಿಕೆ ವಹಿಸಿ. ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿಸಿ ಎಂದು ಸೂಚಿಸಿದರು.
ಸಣ್ಣ ಪುಟ್ಟ ರೆವಿನ್ಯೂ ಸಮಸ್ಯೆಗಳಿಗೂ ಜನ ಸಿಎಂ ಬಳಿಬರುತ್ತಾರೆ ಎಂದರೆ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂಬುದಾಗಿ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಶಿವಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದರು.
ಸಚಿವರುಗಳಾದ ಕೃಷ್ಣಬೈರೇಗೌಡ,ಬೈರತಿ ಸುರೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆ ಆಯುಕ್ತರಾದ ಪಿ.ಸುನಿಲ್ ಕುಮಾರ್, ಸಂಘದ ಉಪಾಧ್ಯಕ್ಷರಾದ ಚನ್ನಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

