ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ಬಗ್ಗೆ ಲಘುವಾಗಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಸಿದ್ದರಾಮಯ್ಯ ಅವರು ಕರ್ನಾಟಕದ ಸೊಕ್ಕಿನ ಮನುಷ್ಯ ಎಂದು ಟೀಕಾಪ್ರಹಾರ ನಡೆಸಿದೆ.
ನೈಸ್ ಯೋಜನೆಯನ್ನು ಸರಕಾರದ ವಶಕ್ಕೆ ಪಡೆಯಲು ಯಾವ ಅತೀಂದ್ರ ಶಕ್ತಿ ಅಡ್ಡವಿದೆಯೊ ಎಂದು ಪ್ರಶ್ನಿಸಿದೆ.
ಮಾಜಿ ಪ್ರಧಾನಿಗಳು ಹೇಳಿದ್ದರಲ್ಲಿ ಖಂಡಿತಾ ಉತ್ಪ್ರೇಕ್ಷೆ ಇಲ್ಲ, ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ, ಹೌದು. ದೇಶವನ್ನು ಜಾತಿ,ಧರ್ಮದಿಂದಲೇ ವಿಭಜಿಸಿ ಪ್ರಜಾಪ್ರಭುತ್ವವನ್ನೇ ಅಂತ್ಯ ಕಾಣಿಸಲು ಹೊರಟಿದ್ದ ಕಾಂಗ್ರೆಸ್, ಚರಿತ್ರೆಯ ಕೊನೇಪುಟದಲ್ಲಿ ಏದುಸಿರು ಬಿಡುತ್ತಿದೆ ಎಂದು ಜೆಡಿಎಸ್ ವ್ಯಂಗ್ಯವಾಡಿದೆ
ಶಾಪ ಹಾಕುವುದನ್ನು ಗೌಡರು ಎಂದೂ ಮಾಡಿಲ್ಲ, ಮಾಡುವುದೂ ಇಲ್ಲ.ಅವರ ಹಸ್ತ ಅಭಯ ಹಸ್ತ. ಅದು ಆಶೀರ್ವಾದ, ಅನುಗ್ರಹದ ದ್ಯೋತಕ.
ಗುರುಸ್ವಾಮಿ ಎಂಬ ಅನಾಮಧೇಯ ವ್ಯಕ್ತಿ ಎದುರು ಸೋತ ನಿಮ್ಮನ್ನು ಅನುಗ್ರಹದಲ್ಲಿಯೇ ಅವರು ಅನುಗ್ರಹಿಸಿದ್ದು ಮರೆತಿರಾ, ಅಂದು ಆ ಕೈ ನಿಮ್ಮ ಕೈ ಹಿಡಿಯದಿದ್ದರೆ ನೀವಿಷ್ಟು ಎತ್ತರಕ್ಕೆ ಏರಲು ಸಾಧ್ಯವಿತ್ತೆ ಸಿದ್ದರಾಮಯ್ಯನವರೇ ಎಂದು ಜೆಡಿಎಸ್, ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ.
ಜಾತ್ಯತೀತತೆ ನೀವಷ್ಟೇ ಹೇಳಬೇಕು ಸಿದ್ದರಾಮಯ್ಯನವರೇ? ಸಿಎಂ ಸಚಿವಾಲಯದ ಕೊಳಕು ಕೊಡವಿದರೆ ನಿಮ್ಮ ಢೋಂಗಿ ಜಾತ್ಯತೀತತೆಯ ಅಸಲಿ ಮುಖ ಕಳಚಿ ಬೀಳುತ್ತದೆ.
ನಿಮ್ಮದೇನಿದ್ದರೂ ಏಕಾಭಿಪ್ರಾಯ, ಸರ್ವಾಧಿಕಾರ ಧೋರಣೆ, ತುಘಲಕ್ ಮನಃಸ್ಥಿತಿ. ದೇವೇಗೌಡರು ಸಾಮಾಜಿಕ ನ್ಯಾಯ, ಜಾತ್ಯತೀತತೆ, ನಂಬಿಕೆ, ವಿಶ್ವಾಸಾರ್ಹತೆ ಉಳ್ಳವರು ಆಗಿಲ್ಲದಿದ್ದಿದ್ದರೆ ನೀವು ಈವರೆಗೆ ಏನೇನೋ ಆಗಿದ್ದಿರಲ್ಲಾ… ಅದರಲ್ಲಿ ಏನೊಂದೂ ಆಗುತ್ತಿರಲಿಲ್ಲ. ನಿಮಗೆ ಏಣಿಯಾಗಿ, ಹೆಗಲಾಗಿದ್ದ ಅವರ ಬೆನ್ನಿಗಿರಿದ ಅಪರ ಬ್ರೂಟಸ್ ನೀವು ಎಂದು ಜೆಡಿಎಸ್ ಕಠೋರವಾಗಿ ಜರಿದಿದೆ.

