ದೇವೇಗೌಡರ ಶಾಪವನ್ನು ಆಶೀರ್ವಾದವಾಗಿ ಸ್ವೀಕಾರ -ಸಿಎಂ ಸಿದ್ದರಾಮಯ್ಯ

ಬೆಂಗಳೂರು: ವಯಸ್ಸಿನಲ್ಲಿ ಹಿರಿಯರಾದ ದೇವೇಗೌಡರ ಶಾಪವನ್ನು ಆಶೀರ್ವಾದ ಎಂದು ಸ್ವೀಕರಿಸುತ್ತೇನೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸಿದ್ದರಾಮಯ್ಯ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಅಂತ್ಯ ಕಾಣಲಿದೆ ಎಂದು ಹೆಚ್‌ಡಿ ದೇವೇಗೌಡರು ಹೇಳಿದ್ದರು.

ಇದಕ್ಕೆ ಟ್ವೀಟ್ ಮಾಡಿರುವ ಸಿಎಂ,ನನ್ನ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಭವಿಷ್ಯ ನುಡಿದಿದ್ದಾರೆ.ಅವರು ವಯಸ್ಸಿನಲ್ಲಿ ದೊಡ್ಡವರು ಅವರ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ ಎಂದು ಬೆರೆದಿದ್ದಾರೆ.

ದೇವೇಗೌಡರಿಗೆ ಹಾಗೂ ಅವರ ಪಕ್ಷಕ್ಕೆ ದೀರ್ಘ ಕಾಲ ಆಯುರಾರೋಗ್ಯವನ್ನು ಪರಮಾತ್ಮ ಕರುಣಿಸಲಿ ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಬೇಕು, ಶಾಪ ಕೊಡಬಾರದು. ದಶಕಗಳ ಕಾಲ ಜಾತ್ಯತೀತತೆಯ ಕಿರೀಟ ಧರಿಸಿಕೊಂಡು ಬಂದಿದ್ದ ಗೌಡರು ಇಳಿಗಾಲದಲ್ಲಿ ಅದನ್ನು ಕೆಳಗೆಸೆದು ಕೋಮುವಾದಿ ಕಿರೀಟವನ್ನು ಧರಿಸಿಕೊಳ್ಳಬೇಕಾಗಿ ಬಂದಿದೆ ಹಾಗಾಗಿ ಹತಾಶೆಯಿಂದ ಇಂತಹ ಹೇಳಿಕೆ ನೀಡಿರಬಹುದೆಂದು ಭಾವಿಸಿದ್ದೇನೆ.

ತಾವು ಹೇಳಿದ್ದು ತಪ್ಪು ಎಂದು ಅವರಿಗೆ ಪ್ರಾಮಾಣಿಕವಾಗಿ ಅನಿಸಿದರೆ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬಹುದು ಎಂದು ಸಿಎಂ ತಿಳಿಸಿದ್ದಾರೆ.

ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂಬ ಸೊಕ್ಕಿನ ಮಾತುಗಳನ್ನು ಆಡುತ್ತಿರುವ ಬಿಜೆಪಿಯ ಗಾಳಿ ಹೆಚ್‌ಡಿ ದೇವೇಗೌಡರಿಗೂ ಸೋಕಿದ ಹಾಗೆ ಕಾಣುತ್ತಿದೆ. ಅದಕ್ಕೆ ಇಂತಹ ಹೇಳಿಕೆ ನೀಡುತ್ತಿದ್ದಾರೆ,ಇದು ‘ಸಂಘ ದೋಷದ ಫಲ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.