ಬಿಜೆಪಿ ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿದೆ – ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಾವ್ಯಾರೂ  ಶ್ರೀ ರಾಮಚಂದ್ರನ ವಿರುದ್ಧವಾಗಿಲ್ಲ,ಆದರೆ ಬಿಜೆಪಿ ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ಶ್ರೀರಾಮಚಂದ್ರನನ್ನು ದೊಡ್ಡ ರಾಜಕೀಯ ವಿಷಯವಾಗಿ ಮಾಡಿಕೊಂಡಿರುವುದನ್ನು ನಾವು ವಿರೋಧಿಸುತ್ತೇವೆ ಎಂದು  ತಿಳಿಸಿದರು.

ವಿಧಾನಸೌಧದಲ್ಲಿಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ‌ ಸಲ್ಲಿಸಿ ನಂತರ ಸಿಎಂ ಮಾತನಾಡಿದರು.

ನಾವೆಲ್ಲರೂ ಶ್ರೀ ರಾಮಚಂದ್ರನ ಭಕ್ತರೇ. ಬಿಜೆಪಿ ರಾಜಕೀಯವಾಗಿ ಮಾತನಾಡುತ್ತಿದ್ದು, ಅದಕ್ಕೆ ಔಷಧಿ ಇಲ್ಲ ಎಂದು ಹೇಳಿದರು.

ರಾಮಮಂದಿರ ಉದ್ಘಾಟನೆಯ ಬಗ್ಗೆ ಕಾಂಗ್ರೆಸ್ ಪಕ್ಷದ  ನಿಲುವಿನ  ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಪಕ್ಷದ ತೀರ್ಮಾನವೇ ನಮ್ಮ ತೀರ್ಮಾನ ಎಂದು ತಿಳಿಸಿದರು.

ನಾವು ರಾಮಚಂದ್ರನನ್ನು ಪೂಜಿಸಿ, ಭಜಿಸಿ, ರಾಮಮಂದಿರವನ್ನು ಕಟ್ಟಿದ್ದೇವೆ. ಆದರೆ ದೇವರ ಹೆಸರಲ್ಲಿ ರಾಜಕೀಯ‌ ಮಾಡುವುದಕ್ಕೆ ವಿರೋಧವಾಗಿದ್ದೇವೆ ಅಷ್ಟೇ ಎಂದು ಹೇಳಿದರು.

ಬಿಜೆಪಿ ಯವರು ಅಯೋಧ್ಯೆಗೆ ಏಕೆ ಹೋಗುತ್ತಾರೆ. ಶ್ರೀ ರಾಮಚಂದ್ರ ಇಲ್ಲಿ ಇಲ್ಲವೇ, ನಮ್ಮಲ್ಲಿರುವ ಶ್ರೀರಾಮನಿಗೆ ಬೆಲೆ ಇಲ್ಲವೇ ಎಂದ ಸಿದ್ದರಾಮಯ್ಯ, ಇಲ್ಲಿಯೂ ಪೂಜೆ ನಡೆಯಲಿದೆ,ಆದರೆ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ನಾನು ಸೂಚಿಸಿಲ್ಲ ಎಂದು ತಿಳಿಸಿದರು.